ಬೆಂಗಳೂರು: ಕಳೆದ ಮೂರು ತಿಂಗಳಿಂದ ವೇತನ ಇಲ್ಲದೆ, ದೀಪದ ಹಬ್ಬ ದೀಪಾವಳಿ ಆಚರಿಸದೆ ಸಂಕಷ್ಟದಲ್ಲಿದ್ದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ನಿಗಮಗಳ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ವೇತನ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಸ್ತು ಎಂದಿದ್ದಾರೆ.
ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಸಿಎಂ ಬಿಎಸ್‍ವೈ ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ 3 ತಿಂಗಳುಗಳ ವೇತನಗಳ ಮೊತ್ತ 634.50 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.

ಸಾರಿಗೆ ಸಚಿವರ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ, ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಸಂಬಳದ 634.50ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಸಾರಿಗೆ ಸಿಬ್ಬಂದಿಗಳ ಮೂರು ತಿಂಗಳುಗಳ ಶೇ.75 ರಷ್ಟು ವೇತನದ ಮೊತ್ತ 634.50 ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇಕಡ 25ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ.
ಮುಖ್ಯಮಂತ್ರಿಗಳ ಈ ನಿರ್ಧಾರದಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು 1 ಲಕ್ಷದ 30 ಸಾವಿರ ಸಿಬ್ಬಂದಿಗಳಿಗೆ ವೇತನ ಪಾವತಿಗೆ ಸಾಧ್ಯವಾದಂತಾಗಿದೆ.

ಕೋವಿಡ್ ನಂತರದಲ್ಲೂ ಸಾರಿಗೆ ಸಂಸ್ಥೆಗಳ ಆದಾಯ ಶೇ.30ರಷ್ಟನ್ನು ಮೀರದಿರುವುದರಿಂದ ಸಾರಿಗೆ ಸಂಸ್ಥೆಗಳ ಸಂಪನ್ಮೂಲಕ್ಕೆ ತೀವ್ರ ನಷ್ಟ ಉಂಟಾಗಿದ್ದರಿಂದ ಡಿಸಿಎಂ ಸವದಿ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರ ಮನವೊಲಿಸಿದ್ದಾರೆ.
ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ಪಾವತಿಗೆ ಕ್ರಮಕೈಗೊಂಡ ಮುಖ್ಯಮಂತ್ರಿಗಳ ಪ್ರಯತ್ನಕ್ಕೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸಾರಿಗೆ ಸಂಸ್ಥೆಗಳ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








