ಪ್ರಭಾಸ್ ರ 21ನೇ ಸಿನಿಮಾದಲ್ಲಿ ಬಾಲಿವುಡ್ ಪದ್ಮಾವತಿ ದೀಪಿಕಾ ನಾಯಕಿ
ಹೈದರಾಬಾದ್ : ಕೆಲ ದಿನಗಳಿಂದ ಟಾಲಿವುಡ್ ಅಂಗಳಲ್ಲಿ ಡಾರ್ಲಿಂಗ್ ಪ್ರಭಾಸ್ ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಟೆ ನಾಯಕಿ ಆಗುತ್ತಾರೆ ಎಂಬ ಗಾಳಿ ಸುದ್ದಿ ಜೋರಾಗಿ ಕೇಳಿಬರುತ್ತಿತ್ತು. ಇದೀಗ ಈ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಿದೆ. ಪ್ರಭಾಸ್ ರ 21ನೇ ಸಿನಿಮಾದಲ್ಲಿ ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ನಟಿಸೋದು ಪಕ್ಕಾ ಆಗಿದೆ.
ಈ ಬಗ್ಗೆ ತೆಲುಗು ಚಲನಚಿತ್ರ ನಿರ್ಮಾಣ ಸಂಸ್ಥೆ ‘ವೈಜಯಂತಿ ಮೂವೀಸ್’ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಜೊತೆಗೆ ಒಂದು ವಿಡಿಯೋ ರಿಲೀಸ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಅವರನ್ನು ವೈಜಯಂತಿ ಮೂವೀಸ್ ಸ್ವಾಗತ ಮಾಡಿದೆ.
ಅಂದಹಾಗೆ ವೈಜಯಂತಿ ಮೂವೀಸ್ ಬಾಹುಬಲಿ ಪ್ರಭಾಸ್ ಜೊತೆ ಸಿನಿಮಾ ಮಾಡಲಿದೆ. ಈ ಚಿತ್ರವು ‘ವೈಜಯಂತಿ ಮೂವೀಸ್’ ನ 50ನೇ ವಾರ್ಷಿಕೋತ್ಸವದ ವಿಶೇಷ ಉಡುಗೊರೆಯಾಗಲಿದೆ. ಹೀಗಾಗಿ ಈ ಸಿನಿಮಾವನ್ನು ನಿರ್ದೇಶಕ ನಾಗ್ ಅಶ್ವಿನ್ ಭಾರೀ ಬಜೆಟ್ ನಲ್ಲಿ ತೆರೆಗೆ ತರಲು ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಚಿತ್ರವನ್ನು ‘ಪ್ರಭಾಸ್ 21’ ಎಂದು ಕರೆಯಲಾಗುತ್ತಿದೆ.
ಸದ್ಯ ಫ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಗೆ ಬಾಲಿವುಡ್ ನ ಮೋಸ್ಟ್ ಸಕ್ಸಸ್ ಫುಲ್ ನಟಿ ದೀಪಿಕಾ ಪಡುಕೋಣೆ ಜೋಡಿ ಆಗುತ್ತಿರುವುದು ಇಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಟಾಪ್ ಕಲಾವಿದರಾಗಿರುವ ಇಬ್ಬರ ಕೆಮಿಸ್ಟ್ರಿಯನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅದರಲ್ಲೂ ಪ್ರಭಾಸ್ ಜೊತೆ ದೀಪಿಕಾ ನಟಿಸೋದು ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ದೀಪಿಕಾ ಪಡುಕೋಣೆ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ದೀಪಿಕಾ ಹೆಸರನ್ನು ಟ್ರೆಂಡಿಂಗ್ ಮಾಡುತ್ತಿದ್ದಾರೆ.
ಇನ್ನು ದೀಪಿಕಾ ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಇದುವರೆಗೂ ತೆಲುಗು ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಸಿನಿಮಾದ ಮೂಲಕ ಅವರು ಟಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡುತ್ತಿದ್ದಾರೆ.








