ಲಂಡನ್: ಭಾರತಕ್ಕೆ ಗಡಿಪಾರು ಆದೇಶ ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ಮೇಲ್ಮನವಿಯನ್ನು ಬ್ರಿಟನ್ ಹೈಕೋರ್ಟ್ ವಜಾ ಮಾಡಿದೆ. ನ್ಯಾಯಮೂರ್ತಿ ಸ್ಟೀಫನ್ ಒರ್ವಿನ್ ಮತ್ತು ಎಲಿಸಬೆತ್ ಲೇಯಿಂಗ್ ಅವರಿದ್ದ ನ್ಯಾಯಪೀಠ ಮಲ್ಯ ಅವರ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಹಿರಿಯ ನ್ಯಾಯಧೀಶರು ಕಂಡುಕೊಂಡಿರುವ ಪ್ರಾಥಮಿಕ ಅಂಶವು ಕೆಲವು ವಿಷಯಗಳಲ್ಲಿ ಭಾರತದ ಪ್ರತಿವಾದಿಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗಿಂತಲೂ ವಿಸ್ತಾರವಾಗಿವೆ ಎಂಬುದನ್ನು ನಾವು ಪರಿಗಣಿಸುತ್ತೇವೆ. ಈ ಅಂಶವು ಭಾರತ ಮಾಡಿರುವ ಏಳು ಆರೋಪಗಳಿಗೆ ಹೊಂದಿಕೆಯಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಈ ಆದೇಶದಿಂದ ಮಲ್ಯ ಇನ್ನು ಭಾರತಕ್ಕೆ ಮರಳಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ಭಾರತದ ಬ್ಯಾಂಕುಗಳಿಗೆ ಸುಮಾರು 9,000 ಕೋಟಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು 2018ರ ಡಿಸೆಂಬರ್ನಲ್ಲಿ ಬ್ರಿಟನ್ನ ವೆಸ್ಟ್ಮಿನ್ಸ್ಟರ್ ನ್ಯಾಯಾಲಯ ಆದೇಶ ನೀಡಿತ್ತು.ಈ ಆದೇಶವನ್ನು ಮಲ್ಯ ಈಗ ಪ್ರಶ್ನಿಸಿದ್ದರು.








