ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳ ಪೈಕಿ ಒಂದನ್ನಾದರೂ ಪಡೆಯಬೇಕು ಅನ್ನುವ ಛಲದಲ್ಲಿತ್ತು. ಆದರೆ ಸನ್ರೈಸರ್ಸ್ ನೀಡಿದ ಸೋಲಿನ ಶಾಕ್ ವಿರಾಟ್ ಬಳಗವನ್ನು ಲೀಗ್ನಲ್ಲಿ 3ನೇ ಸ್ಥಾನಕ್ಕೆ ಫಿಕ್ಸ್ ಆಗುವಂತೆ ಮಾಡಿದೆ. ಅಬುಧಾಬಿಯಲ್ಲಿ ಆರ್ಸಿಬಿ ವಿರುದ್ಧ 4 ರನ್ಗಳ ಜಯ ಸಾಧಿಸಿದ ಸನ್ ರೈಸರ್ಸ್ ಹೈದ್ರಾಬಾದ್ ವಿರಾಟ್ ಬಳಗಕ್ಕೆ ಶಾಕ್ ನೀಡಿತು.
ಟಾಸ್ ಗೆದ್ದ ಆರ್ಸಿಬಿ ಎಸ್ಆರ್ಎಚ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಜೇಸನ್ ರಾಯ್ ಮತ್ತು ಅಭಿಷೇಕ್ ಶರ್ಮಾ ಜೊತೆಯಾಟ ಹೆಚ್ಚು ಹೊತ್ತು ನಡೆಯಲಿಲ್ಲ. ಶರ್ಮಾ 13 ರನ್ಗಳಿಸಿ ಗಾರ್ಟನ್ಗೆ ವಿಕೆಟ್ ಒಪ್ಪಿಸಿದರು. ರಾಯ್ ಜೊತೆ ಸೇರಿದ ಕೇನ್ ವಿಲಿಯಮ್ಸನ್ ಪವರ್ ಪ್ಲೇ ಲಾಭ ಪಡೆದುಕೊಂಡು 70 ರನ್ಗಳ ಜೊತೆಯಾಟ ಆಡಿದರು. ಈ ಹಂತದಲ್ಲಿ ದಾಳಿಗಿಳಿದ ಹರ್ಷಲ್ ಪಟೇಲ್ 29 ಎಸೆತಗಳಲ್ಲಿ 31 ರನ್ಗಳಿಸಿದ್ದ ವಿಲಿಯಮ್ಸ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ರಾಯ್ ಜೊತೆ ಸೇರಿದ ಪ್ರಿಯಮ್ ಗರ್ಗ್ ಕ್ರೀಸ್ಗೆ ಬರ್ತಾ ಇದ್ದಂತೆಯೇ ಬಿರುಸಿನ ಆಟಕ್ಕೆ ಇಳಿದರು. ಡೇನಿಯಲ್ ಕ್ರಿಶ್ಚಿಯನ್ ಗರ್ಗ್ ಆಟಕ್ಕೆ ಕಡಿವಾಣ ಹಾಕಿದರು. 38 ಎಸೆತಗಳಲ್ಲಿ 44 ರನ್ಗಳಿಸಿದ್ದ ರಾಯ್ ಕೂಡ ಅಪಾಯಕಾರಿಯಾಗಿ ಕಾಣುತ್ತಿದ್ದರು. ಆದರೆ ಕ್ರಿಶ್ಚಿಯನ್ ಎಸೆತದಲ್ಲಿ ಕಾಟ್ ಅಂಡ್ ಬೋಲ್ಡ್ ಆಗಿ ನಿರಾಸೆ ಅನುಭವಿಸಿದರು. ಚಹಲ್ ಅಬ್ದುಲ್ ಸಮದ್ರನ್ನು ಹೆಚ್ಚು ಹೊತ್ತು ಆಡಲು ಬಿಡಲಿಲ್ಲ. ವೂರ್ದಧಿಮಾನ್ ಸಾಹಾ ಮತ್ತು ಜೇಸನ್ ಹೋಲ್ಡರ್ ಸ್ಲಾಗ್ ಓವರುಗಳಲ್ಲಿ ಬಿರುಸಿನ ಆಟವಾಡಿದರು. 20 ಓವರುಗಳಲ್ಲಿ ಸನ್ರೈಸರ್ಸ್ 7 ವಿಕೆಟ್ ಕಳೆದುಕೊಂಡು 141 ರನ್ಗಳಿಸಿತು. ಹರ್ಷಲ್ ಪಟೇಲ್ 3 ವಿಕೆಟ್ ಪಡೆದು ಮಿಂಚಿದರು.
ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಚೇಸಿಂಗ್ ಆರಂಭಿಸಿದರು. ಮೊದಲ ಓವರ್ನಲ್ಲೇ ಭುವನೇಶ್ವರ್ ಕುಮಾರ್ 5 ರನ್ಗಳಿಸಿದ್ದ ವಿರಾಟ್ ವಿಕೆಟ್ ಕಬಳಿಸಿದರು. ಡೇನಿಯಲ್ ಕ್ರಿಶ್ಚಿಯನ್ ಸಿದ್ಧಾರ್ಥ್ ಕೌಲ್ ವಿಕೆಟ್ ಹಾರಿಸಿದರು. ದೇವದತ್ ಪಡಿಕಲ್ ಮತ್ತು ಶ್ರೀಕರ್ ಭರತ್ ಪವರ್ ಪ್ಲೇನಲ್ಲಿ ರನ್ಗಳಿಸಲು ಪರದಾಟ ನಡೆಸಿದರು. ಉಮ್ರಾನ್ ಮಲಿಕ್ 12 ರನ್ಗಳಿಸಿದ್ದ ಭರತ್ ವಿಕೆಟ್ ಪಡೆದು ಎಸ್ಆರ್ಎಚ್ಗೆ ಬ್ರೇಕ್ ತಂದುಕೊಟ್ಟರು.
ಪಡಿಕಲ್ ಜೊತೆ ಸೇರಿದ ಗ್ಲೆನ್ಮ್ಯಾಕ್ಸ್ ವೆಲ್ ಬಿರುಸಿನ ಆಟಕ್ಕೆ ಇಳಿದರು. ಆದರೆ ಪಡಿಕಲ್ ಬ್ಯಾಟ್ನಿಂದ ರನ್ ಬರಲಿಲ್ಲ. 25 ಎಸೆತಗಳಲ್ಲಿ 3 ಫೋರ್ ಮತ್ತು 2 ಸಿಕ್ಸರ್ ನೆರವಿನಿಂದ 40 ರನ್ಗಳಿಸಿದ್ದ ಮ್ಯಾಕ್ಸ್ವೆಲ್ ರನೌಟ್ ಬಲೆಯಲ್ಲಿ ಬಿದ್ದರು. ದೇವದತ್ ಪಡಿಕಲ್ 52 ಎಸೆತಗಳಲ್ಲಿ 41ರನ್ಗಳಿಸಿದ್ದು ಆರ್ಸಿಬಿ ಚೇಸಿಂಗ್ಗೆ ಹೊಡೆತ ನೀಡಿತ್ತು. ರಶೀದ್ ಖಾನ್ ಪಡಿಕಲ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಎಬಿ ಡಿ ವಿಲಿಯರ್ಸ್ ಮತ್ತು ಶಹಬಾಝ್ ಅಹ್ಮದ್ ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಅನ್ನುವಾಗಲೇ 14 ರನ್ಗಳಿಸಿದ್ದ ಅಹ್ಮದ್ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ನಲ್ಲಿ ಆರ್ಸಿಬಿ ಗೆಲುವಿಗೆ 13 ರನ್ಗಳು ಬೇಕಿತ್ತು. ಭುವನೇಶ್ವರ್ ಕುಮಾರ್ ಉತ್ತಮ ಬೌಲಿಂಗ್ ನಡೆಸಿ ಕೇವಲ 8 ರನ್ಗಳನ್ನಷ್ಟೇ ನೀಡಿದ್ದರು. ಆರ್ಸಿಬಿ 4 ರನ್ಗಳಿಂದ ಪಂದ್ಯ ಸೋತಿತು. ಪ್ಲೇ-ಆಫ್ಗೆ ಅರ್ಹತೆ ಪಡೆದುಕೊಂಡಿದ್ದರೂ ಆರ್ಸಿಬಿ ಎಲಿಮಿನೇಟರ್ನಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.









