ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಲಡಾಖ್ ಭೇಟಿ
ಹೊಸದಿಲ್ಲಿ, ಜುಲೈ 16: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಲಡಾಖ್ಗೆ ಭೇಟಿ ನೀಡಿ ದೇಶದ ಮಿಲಿಟರಿ ಸನ್ನದ್ಧತೆ ಬಗ್ಗೆ ಪರಿಶೀಲನೆ ನಡೆಸಿ ಒಟ್ಟಾರೆ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ. ಭಾರತ ಮತ್ತು ಚೀನಾ ಲಡಾಖ್ ಗಡಿಯಿಂದ ತಮ್ಮ ಸೈನ್ಯವನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಗಡಿ ಉದ್ವಿಗ್ನತೆ ಕಡಿಮೆ ಮಾಡಲು ಮುಂದಾಗಿವೆ.
ಸಿಂಗ್ ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಪಾಲ್ಗೊಳ್ಳಲಿದ್ದು, ಮೇ 5 ರಂದು ಭಾರತ ಮತ್ತು ಚೀನಾ ಸೇನೆಗಳ ನಡುವೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಭಿನ್ನಾಭಿಪ್ರಾಯ ಪ್ರಾರಂಭವಾದ ನಂತರ ಇದು ಲಡಾಖ್ಗೆ ಅವರ ಮೊದಲ ಭೇಟಿಯಾಗಿದೆ.

ಜುಲೈ 3 ರಂದು ಪ್ರಧಾನಿ ನರೇಂದ್ರ ಮೋದಿಯವರ ಧಿಡೀರ್ ಲಡಾಖ್ ಭೇಟಿ ನೀಡಿ ಸೈನಿಕರನ್ನು ಹುರಿದುಂಬಿಸಿದ್ದರು.
ಜನರಲ್ ನಾರವನೆ, ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಯೋಗೇಶ್ ಕುಮಾರ್ ಜೋಶಿ, 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಇತರ ಹಿರಿಯ ಸೇನಾಧಿಕಾರಿಗಳೊಂದಿಗೆ ಸಿಂಗ್ ಈ ಪ್ರದೇಶದ ಭದ್ರತಾ ಪರಿಸ್ಥಿತಿಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಡಾಖ್ನಿಂದ ರಕ್ಷಣಾ ಸಚಿವರು ಶ್ರೀನಗರಕ್ಕೆ ಪ್ರಯಾಣಿಸಲಿದ್ದು, ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆಯ (ಎಲ್ಒಸಿ) ಪರಿಸ್ಥಿತಿಯನ್ನು ಪರಿಶೀಲಿಸಲು ಶನಿವಾರ ಹಿರಿಯ ಮಿಲಿಟರಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಂಗ್ ಮೂಲತಃ ಜುಲೈ 3 ರಂದು ಲಡಾಖ್ಗೆ ಭೇಟಿ ನೀಡಬೇಕಿತ್ತು ಆದರೆ ಅದನ್ನು ಮುಂದೂಡಲಾಯಿತು.
ಮೇ 5 ರಿಂದ ಎಂಟು ವಾರಗಳ ಕಾಲ ಪೂರ್ವ ಮತ್ತು ಲಡಾಖ್ನ ಅನೇಕ ಸ್ಥಳಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಗಾಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆಗಳ ನಂತರ ಉದ್ವಿಗ್ನತೆಯು ಇನ್ನಷ್ಟು ಪಟ್ಟು ಹೆಚ್ಚಾಯಿತು, ಇದರಲ್ಲಿ 20 ಭಾರತೀಯ ಸೇನಾ ಸಿಬ್ಬಂದಿಗಳು ಹುತಾತ್ಮರಾದರು.
ಆದಾಗ್ಯೂ, ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ, ಎರಡೂ ಕಡೆಯವರು ಜುಲೈ 6 ರಂದು ಪರಸ್ಪರ ಹಿಂದೆ ಸರಿಯವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು ಮತ್ತು ಘರ್ಷಣೆ ನಡೆದ ಸ್ಥಳಗಳಿಂದ ಈಗಾಗಲೇ ಸೈನ್ಯವನ್ನು ಹಿಂತೆಗೆದುಕೊಂಡಿದ್ದಾರೆ.

ಮಂಗಳವಾರ, ಉಭಯ ಸೇನೆಗಳ ಹಿರಿಯ ಕಮಾಂಡರ್ಗಳು ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಭಾರತೀಯ ನಿಯೋಗವು ಚೀನಾದ ಸೈನ್ಯಕ್ಕೆ ಅತ್ಯಂತ ಸ್ಪಷ್ಟವಾದ ಸಂದೇಶವನ್ನು ನೀಡಿದೆ. ಪೂರ್ವ ಲಡಾಕ್ ನಲ್ಲಿ ಯಥಾಸ್ಥಿತಿಯನ್ನು ಪುನಃಸ್ಥಾಪಿಸಬೇಕು.ಎಲ್ಎಸಿಯ ಉದ್ದಕ್ಕೂ ಶಾಂತಿ ಮತ್ತು ಶಾಂತಿಯನ್ನು ಮರಳಿ ತರಲು ಗಡಿ ನಿರ್ವಹಣೆಯ ಪ್ರೋಟೋಕಾಲ್ ಗಳನ್ನು ಪಾಲಿಸಬೇಕು ಎಂದು ಷರತ್ತು ವಿಧಿಸಿದ್ದು, ಇದಕ್ಕೆ ಚೀನಾ ಒಪ್ಪಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸುಮಾರು 15 ಗಂಟೆಗಳ ಕಾಲ ನಡೆದ ತೀವ್ರವಾದ ಮತ್ತು ಸಂಕೀರ್ಣವಾದ ಮಾತುಕತೆಗಳ ಸಂದರ್ಭದಲ್ಲಿ, ಭಾರತೀಯ ನಿಯೋಗವು ಈ ಪ್ರದೇಶದ ಒಟ್ಟಾರೆ ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿ ಹೆಚ್ಚಾಗಿ ಚೀನಾದ ಮೇಲಿದೆ ಎಂದು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.








