ರಷ್ಯಾದಿಂದ ಭಾರತಕ್ಕೆ ಹಿಂದಿರುಗುವಾಗ ಟೆಹ್ರಾನ್‌ಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಾಸ್ಕೋ, ಸೆಪ್ಟೆಂಬರ್06: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದಿಂದ ಭಾರತಕ್ಕೆ ಹಿಂದಿರುಗುವಾಗ ಟೆಹ್ರಾನ್‌ಗೆ ಭೇಟಿ ನೀಡಲಿದ್ದು, ಇರಾನಿನ ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸಲಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ), ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (ಸಿಎಸ್‌ಟಿಒ), ಮತ್ತು ಕಾಮನ್‌ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐಎಸ್) ದೇಶಗಳ ಜಂಟಿ ಸಭೆಯಲ್ಲಿ ಭಾಗವಹಿಸಲು ರಾಜನಾಥ್ ಸಿಂಗ್ ಮಾಸ್ಕೋಗೆ ಭೇಟಿ ನೀಡಿದ್ದಾರೆ.
ಮಾಸ್ಕೋದಿಂದ ಹೊರಡುವ ಮುನ್ನ ಅವರು ನಾನು ಟೆಹ್ರಾನ್‌ಗೆ ಭೇಟಿ ಕೊಟ್ಟು ಇರಾನ್‌ನ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿಯ ಜೊತೆ ಮಾತುಕತೆ ನಡೆಸಲಿದ್ದೇನೆ ಎಂದು ಅವರು ಹೇಳಿದರು. ಮಾಸ್ಕೋದಲ್ಲಿ, ರಕ್ಷಣಾ ಸಚಿವರು ತಮ್ಮ ಚೀನಾದ ಸಹವರ್ತಿ ಜನರಲ್ ವೀ ಫೆಂಗ್ ಅವರನ್ನು ಭೇಟಿಯಾದರು ಮತ್ತು ಪೂರ್ವ ಲಡಾಖ್ ನಲ್ಲಿನ ಉಭಯ ದೇಶಗಳ ನಡುವಿನ ಗಡಿ ವಿವಾದದ ಬಗ್ಗೆ ಚರ್ಚೆ ನಡೆಸಿದರು.
ಎಸ್‌ಸಿಒ ಸಭೆಯ ಹೊರತಾಗಿ ಸಿಂಗ್ ಸೆಪ್ಟೆಂಬರ್ 4 ರಂದು ಮಾಸ್ಕೋದಲ್ಲಿ ಫೆಂಗ್ ಅವರನ್ನು ಭೇಟಿಯಾದರು.
ಪೂರ್ವ ಲಡಾಖ್‌ನಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿ ಚೀನಾದ ಸೈನ್ಯವು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದೆ ಎಂದು ಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತ-ಚೀನಾ ಸಂಬಂಧಗಳ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಉಭಯ ಕಡೆಯವರು ಗಮನಹರಿಸಬೇಕು ಮತ್ತು ಸಾಧ್ಯವಾದಷ್ಟು ಬೇಗ ಪರಿಸ್ಥಿತಿ ಉಲ್ಬಣಗೊಳ್ಳುವ ಮೊದಲು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಉಭಯ ಸಚಿವರು ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳ ಬಗ್ಗೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸ್ಪಷ್ಟ ಮತ್ತು ಆಳವಾದ ಚರ್ಚೆ ನಡೆಸಿದರು.
ಪೂರ್ವ ಲಡಾಕ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳ ಸೈನಿಕರು ನಾಲ್ಕು ತಿಂಗಳಿನಿಂದ ಜಮಾವಣೆಗೊಂಡಿದ್ದಾರೆ. ಹಲವಾರು ಹಂತಗಳಲ್ಲಿ ಮಾತುಕತೆ ನಡೆದ ಹೊರತಾಗಿಯೂ, ಯಾವುದೇ ಪ್ರಗತಿಯಾಗಿಲ್ಲ