ಪಟಾಕಿ ಹಚ್ಚದೇ ದೀಪಾವಳಿ ಆಚರಣೆಗೆ ಶಾಲೆಗಳಲ್ಲಿಯೇ ಮಕ್ಕಳಿಗೆ ಪ್ರೇರಣೆ ನೀಡಲು ದೆಹಲಿ ಸರ್ಕಾರದಿಂದ ಸೂಚನೆ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ವಾಯು ಮಾಲಿನ್ಯದ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತಿದೆ. ಪ್ರಮುಖ ವಾಯು ಮಾಲಿನ್ಯ ನಗರಗಳಲ್ಲಿ ದೆಹಲಿ ಪ್ರಮುಖ ಸ್ಥಾನದಲ್ಲಿದೆ. ಆದ್ರೆ ಕೇಜ್ರಿವಾಲ್ ನೇತೃತ್ವದ ಸರ್ಕಾರವು ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗೆ ಟೊಂಕ ಕಟ್ಟಿ ನಿಂತಿದೆ. ಸಾಧ್ಯವಾದ ಎಲ್ಲಾ ಕ್ರಮಗಳನ್ನ ಕೈಗೊಂಡಿದೆ. ಈ ನಡುವೆ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸಲು ಮಕ್ಕಳನ್ನು ಪ್ರೇರೇಪಿಸಲು ಶಾಲೆ ಮತ್ತು ಕಾಲೇಜುಗಳಿಗೆ ದೆಹಲಿ ಸರ್ಕಾರ ಸೂಚನೆ ನೀಡಿದೆ.
ನವದೆಹಲಿಯಲ್ಲಿ ನವೆಂಬರ್ 1ರಿಂದ ದೆಹಲಿಯಲ್ಲಿ ಶಾಲೆಗಳು ಶುರುವಾಗಿವೆ. ಶಾಲೆಗಳಲ್ಲಿ ದೀಪಾವಳಿ ಸೇರಿದಂತೆ ಮುಂಬರುವ ಎಲ್ಲ ಹಬ್ಬಗಳನ್ನೂ ಪಟಾಕಿ ರಹಿತವಾಗಿ ಆಚರಿಸಲು ಮಕ್ಕಳನ್ನು ಪ್ರೇರೇಪಿಸುವಂತೆ ಶಿಕ್ಷಕರನ್ನು ದೆಹಲಿ ಸರ್ಕಾರ ಕೇಳಿಕೊಂಡಿದೆ. ತರಗತಿಗಳ ವೇಳೆ ಮತ್ತು ಶಾಲೆಗಳ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ಪಟಾಕಿಗಳಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪಟಾಕಿ ಹೊಡೆಯದಂತೆ ಜಾಗೃತಿ ಮೂಡಿಸಲು ಹೇಳಿದೆ. ಮುಂಬರುವ ಎಲ್ಲ ಹಬ್ಬಗಳನ್ನು ದೀಪ, ಮೇಣ ಬೆಳಗುವ ಮೂಲಕ ಆಚರಿಸಲು ತಿಳಿಸುವಂತೆ ಶಾಲೆ ಮುಖ್ಯಸ್ಥರಿಗೆ ಸರ್ಕಾರ ಸೂಚಿಸಿದೆ.