ಡೆಹ್ರಾಡೂನ್: ಕೊರೊನಾ ರೋಗಿ ಎಂಬ ಕಾರಣಕ್ಕೆ ನಾಲ್ಕು ಆಸ್ಪತ್ರೆಗಳು ತುಂಬು ಗರ್ಭಿಣಿಯನ್ನು ಅಡ್ಮಿಟ್ ಮಾಡಲು ಹಿಂದೇಟು ಹಾಕಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಅವಳಿ ಮಕ್ಕಳಿಗೆ ಜನ್ಮ ನೀಡಿ ತಾಯಿ ಇಹಲೋಕ ತ್ಯಜಿಸಿದ ಅಮಾನವೀಯ ಘಟನೆ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‍ನಲ್ಲಿ ನಡೆದಿದೆ.
ಸುಧಾ ಸೈನಿ ಎಂಬ 24ರ ಹರೆಯದ ತುಂಬು ಗರ್ಭಿಣಿಯನ್ನು ಆಕೆಯ ಪತಿ ಕಮಲೇಶ್ ಸೈನಿ ಹೆರಿಗೆಗೆಂದು ಡೆಹ್ರಾಡೂನ್‍ನ ನಾಲ್ಕು ಆಸ್ಪತ್ರೆಗಳಿಗೆ ತಿರುಗಿದ್ದಾರೆ. ಮೊದಲು ಎರಡು ಸರ್ಕಾರಿ ಆಸ್ಪತ್ರೆಗಳು, ನಂತರ ಎರಡು ಖಾಸಗಿ ಆಸ್ಪತ್ರೆಗಳಿಗೂ ಹೋಗಿದ್ದಾರೆ. ಯಾವ ಆಸ್ಪತ್ರೆಗಳೂ ಆಕೆ ಕೊರೊನಾ ರೋಗಿ ಎಂಬ ಕಾರಣಕ್ಕೆ ಅಡ್ಮಿಟ್ ಮಾಡಿಕೊಳ್ಳಲೇ ಇಲ್ಲ. ಕೊನೆಗೆ ಐದನೇ ಆಸ್ಪತ್ರೆಗೆ ಹೋದರೂ ಅದೇ ಸ್ಥಿತಿ. ಸ್ಥಳೀಯ ಶಾಸರೊಬ್ಬರು ಮಧ್ಯಪ್ರವೇಶಿಸುತ್ತಿದ್ದಂತೆ ಅಡ್ಮಿಟ್ ಮಾಡಿಕೊಳ್ಳಲಾಯಿತು. ಆದರೆ, ಆಕೆಯನ್ನು ಜೀವಂತವಾಗ ಉಳಿಸಿಕೊಳ್ಳಲು ಆಗಲೇ ಇಲ್ಲ.
7 ತಿಂಗಳ ಗರ್ಭಿಣಿಯಾಗಿದ್ದ ಸುಧಾ ಸೈನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಪತಿ ಕಮಲೇಶ್ ಆಕೆಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಅನಿಮಿಯಾದಿಂದ ಬಳಲುತ್ತಿದ್ದು ರಕ್ತದ ವ್ಯವಸ್ಥೆ ಮಾಡುವಂತೆ ಹೇಳಿದರೆ ಹೊರತು ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳದೆ ಒಂಭತ್ತು ತಿಂಗಳ ನಂತರ ಬನ್ನಿ ಎಂದು ವಾಪಸ್ ಕಳಿಸಿದ್ದಾರೆ. ಸುಧಾ ಆರೋಗ್ಯ ಸ್ಥಿತಿ ಹದಗೆಡುತ್ತಾ ಹೋಗುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗತೊಡಗಿತು. ಹೊಟ್ಟೆನೋವು ಹೆಚ್ಚಾಗುತ್ತಿದ್ದಂತೆ ಪತಿ ಕಮಲೇಶ್ ಮತ್ತೊಂದು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೂ ಕೂಡ ಜ್ವರ ಇದೆ ಎಂಬ ಕಾರಣಕ್ಕೆ ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲೇ ಇಲ್ಲ. ನಂತರ ಎರಡು ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಅವರೂ ವಾಪಸ್ ಕಳಿಸಿದ್ದಾರೆ.
ಐದನೇ ಆಸ್ಪತ್ರೆಗೆ ಹೋದಾಗ ಪರಿಸ್ಥಿತಿ ಗಂಭೀರವಾಗಿತ್ತು. ಕೊನೆಗೂ ವೈದ್ಯರು ಆಕೆಗೆ ಹೆರಿಗೆ ಮಾಡಿಸಿದರು. ಅವಳಿ ಮಕ್ಕಳೂ ಜನಿಸಿದವು. ತಾಯಿ ಮಡಿಲಲ್ಲಿ ಮುದ್ದಾದ ಎರಡು ಗಂಡು ಮಕ್ಕಳು ಆಟವಾಡುತ್ತಿದ್ದವು. ಆದರೆ, ವಿಧಿಯಾಟ ಬೇರೆಯದೇ ಆಗಿತ್ತು ಅಂತ ಕಾಣಿಸುತ್ತದೆ. ಹೆರಿಯಾದ ಎರಡೇ ದಿನಗಳಲ್ಲಿ ಸುಧಾಸೈನಿ ಕೊನೆಯುಸಿರೆಳೆದಿದ್ದಾರೆ.
ಘಟನೆ ಬಗ್ಗೆ ಸಾರ್ವಜನಿಕ ವಂಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಉತ್ತರಾಖಂಡ ಸರ್ಕಾರ, ಮೂರು ಹಂತದ ತನಿಖೆಗೆ ಆದೇಶ ನೀಡಿದೆ. ಉತ್ತಾರಖಂಡ ಆರೋಗ್ಯ ಇಲಾಖೆ ಕಾರ್ಯದರ್ಶಿ, ರಾಜ್ಯ ಮುಖ್ಯ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ಆದೇಶ ನೀಡಲಾಗಿದೆ. ಆದರೆ, ತಾಯಿ ಮಡಿಲಲ್ಲಿ ಬೆಳೆಯಬೇಕಿದ್ದ ಅವಳಿ ಕಂದಮ್ಮಗಳು ವೈದ್ಯರು ಮಾಡಿದ ಯಡವಟ್ಟಿಗೆ ಅನಾಥವಾಗಿರುವುದು ವಿಪರ್ಯಾಸವೇ ಸರಿ








