Delhi MCD Election : ದೆಹಲಿ ಜನತೆಯ ದಿಲ್ ಗೆದ್ದ ಆಮ್ ಆದ್ಮಿ…
ಕಳೆದ 15 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸ್ವಚ್ಛತೆಯನ್ನ ಶುರು ಮಾಡಿದ್ದು, ದೆಹಲಿ ಗದ್ದುಗೆಯನ್ನ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
250 ಸ್ಥಾನಗಳಿಗೆ ನಡೆದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 134 ಸ್ಥಾನ ಗೆಲ್ಲುವ ಮೂಲಕ ಆಪ್ ಬಹುಮತವನ್ನ ಪಡೆದುಕೊಂಡಿದೆ. ಬಹುಮತಕ್ಕಿಂತ 8 ಹೆಚ್ಚು ಸ್ಥಾನಗಳನ್ನ ತನ್ನದಾಗಿಸಿಕೊಂಡಿದೆ. ಮತ್ತೊಂದೆಡೆ ಬಿಜೆಪಿ 104 ಸ್ಥಾನಗಳಿಗೆ ಕುಸಿದಿದ್ದರೆ, ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ದೆಹಲಿ ಮುನ್ಸಿಪಾಲಿಟಿ ಗೆಲುವಿಗಾಗಿ ಸಿ ಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು “ದೆಹಲಿಯನ್ನು ಸ್ವಚ್ಛಗೊಳಿಸುವ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸುವ ಜವಾಬ್ದಾರಿಯನ್ನು ದೆಹಲಿಯ ಜನರು ತಮ್ಮ ಮಗ ಮತ್ತು ಸಹೋದರನಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಹಕಾರವೂ ಬೇಕು. ಪ್ರಧಾನಿಯವರ ಆಶೀರ್ವಾದವೂ ಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಗೆಲುವು ಖಚಿತವಾಗುತ್ತಿದ್ದಂತೆ ಪಕ್ಷದ ಧ್ವಜಗಳನ್ನ ಹಿಡಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯ ಅವರು MCD ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿಗೆ ಮತ ಹಾಕಿದ್ದಕ್ಕಾಗಿ ದೆಹಲಿಯ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ನಕಾರಾತ್ಮಕ ಪಕ್ಷವನ್ನ ಸೋಲಿಸಲು ಅವರ ಜನಾದೇಶವು ಸಹಾಯ ಮಾಡಿದೆ ಎಂದಿದ್ದಾರೆ.
ಬೆಳಿಗ್ಗೆಯಿಂದ ನಡೆದ ತೀವ್ರ ಹೋರಾಟದ ಕದನದಲ್ಲಿ ಬಿಜೆಪಿ ಆರಂಭದಲ್ಲಿ ಸುಮಾರು ಒಂದುವರೇ ಗಂಟೆಗಳ ಕಾಲ ಆಪ್ ಗೆ ತೀವ್ರ ಪೈಪೋಟಿ ನೀಡಿತು. ಆದರೆ ಆನಂತರ ನಡೆದ ಟ್ರೆಂಡ್ ನಲ್ಲಿ ಆಪ್ ಬಿಜೆಪಿಯನ್ನ ಹಿಂದಿಕ್ಕಿ ಗದ್ದುಗೆಯನ್ನ ತನ್ನದಾಗಿಸಿಕೊಂಡಿದೆ.
Delhi MCD Election : Aam Aadmi Party gets majority, ends BJP’s rule in Delhi