ಹಾಸನ: ರಾಜ್ಯದಲ್ಲಿ ಮರಾಠಿಗರಿಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಹೊರಟಿರುವುದನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದಿಂದ ಹಾಸನದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಯಿತು.
ಕರವೇ ಹಾಸನ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ನೇತೃತ್ವದಲ್ಲಿ ನಡೆದ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವಣಕ್ಕೆ ಆಗಮಿಸಿತು. ಸರ್ಕಾರ ಮರಾಠಿ ಪ್ರಾಧಿಕಾರ ಆದೇಶ ವಾಪಸ್ ಪಡೆಯಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸತೀಶ್ ಪಟೇಲ್ ಮನವಿ ಸಲ್ಲಿಸಿದರು.
ಯಾವುದೋ ಪ್ರಭಾವಿಗಳಿಗೆ ಮಣಿದು ಮತ್ತು ಬೆಳಗಾವಿಯ ರಾಜಕೀಯ ದೃಷ್ಟಿಯಿಂದ ರಾಜ್ಯದಲ್ಲಿ ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡ ಹೊರಟಿರುವುದು ದುರದೃಷ್ಟಕರವಾಗಿದೆ. ಅದರಲ್ಲು ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರಿಗೆ ಮರಾಠಿಗರು ಒಂದಲ್ಲ ಒಂದು ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರ ಇಲ್ಲಿಯವರೆಗೂ ಯಾವುದೇ ದಿಟ್ಟ ಕ್ರಮವನ್ನು ಕೈಗೊಂಡಿರುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡುತ್ತಿರುವುದು ನಿಜಕ್ಕು ತೀರ ದುರದೃಷ್ಟಕರ ಸಂಗತಿಯಾಗಿರುತ್ತದೆ ಎಂದು ಸತೀಶ್ ಕಿಡಿಕಾರಿದರು.
ಬೆಳಗಾವಿಯ ದೊಡ್ಡ ದೊಡ್ಡ ಪ್ರಭಾವಿ ರಾಜಕಾರಣಿಗಳಿಗೆ ಮಣಿದು ಹಾಗೂ ಮುಂದಿನ ಚುನಾವಣಾ ದೃಷ್ಟಿಯಿಂದ ಇಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡುತ್ತಿರುವುದನ್ನು ಕೈಬಿಟ್ಟರೆ ಕ್ಷೇಮ ಹಾಗೂ ಮುಂದಿನ ದಿನದಲ್ಲಿ ನಿಮ್ಮ ಸರ್ಕಾರವು ಉಳಿಯಬೇಕಾದರೇ ತಾವು ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಒಂದು ವೇಳೆ ನಮ್ಮ ಮನವಿಗೆ ಬೆಲೆ ಕೊಡದೆ ಬರಿ ನಿಮ್ಮ ರಾಜಕೀಯಕ್ಕೆ ಬೆಲೆ ಕೊಟ್ಟು ಕನ್ನಡಿಗರಿಗೆ ಅನ್ಯಾಯ ಮಾಡಿದರೆ ಮುಂದಿನ ದಿನಗಳಲ್ಲಿ ತಾವು ಹಾಗೂ ತಮ್ಮ ಪಕ್ಷವು ಕರ್ನಾಟಕವನ್ನು ಹೇಗೆ ಎದುರಿಸುತ್ತೀರೋ ನೋಡೋಣ ಎಂದು ಸವಾಲು ಹಾಕಿದರು.
ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂಬ ದೃಷ್ಟಿಯನ್ನು ಇಟ್ಟುಕೊಂಡು ತಾವು ಕರ್ನಾಟಕ ರಾಜ್ಯದಲ್ಲಿ ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ತೆಗೆದುಕೊಂಡಿರುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು. ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳದೇ ಕೇವಲ ರಾಜಕೀಯ ದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡರೆ ಮುಂದೆ ತಾವು ಮತ್ತು ತಮ್ಮ ಸರ್ಕಾರವು ಬಾರಿ ಬೆಲೆ ತೆರಬೇಕಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಎಲ್ಲಾ ಜಾತಿಯವರು ತಮ್ಮ ತಮ್ಮ ಜನಾಂಗಕ್ಕೆ ಪ್ರಾಧಿಕಾರವನ್ನು ಕೇಳಬಹುದು. ಅದು ಅಲ್ಲದೆ ಜಾತಿಗಳಲ್ಲಿ ಇರುವ ಉಪ – ಜಾತಿಗಳು ಸಹಾ ನಾಳೇ ಏನಾದರೋ ತಮಗೂ ಸಹಾ ಪ್ರಾಧಿಕಾರ ರಚನೆ ಮಾಡಿ ಎಂದು ಕೇಳಿದರೆ ಆಗ ತಾವು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಈ ವಿಷಯದಲ್ಲಿ ತಮಗೆ ಓಟು ನೀಡಿದ ಬುದ್ಧಿವಂತ ಜನರ ಸಲಹೆಗಳನ್ನು ಕೇಳಬೇಕು ಎಂಬ ಕಲ್ಪನೆಯು ತಮಗೆ ಬಾರದಿರವುದು ನಿಜಕ್ಕು ಓಟು ಕೊಟ್ಟು ತಮ್ಮ ಸರ್ಕಾರವನ್ನು ಗೆಲ್ಲಿಸಿದ ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗಿದೆ. ನಿರ್ಧಾರ ಬದಲಾಯಿಸದಿದ್ದರೇ ಕರ್ನಾಟಕದ ಎಲ್ಲಾ ಸಂಘಟನೆಗಳು ಮುಂದಿನ ದಿನಗಳಲ್ಲಿ ತೀವ್ರತರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಡಿಸೆಂಬರ್ ತಿಂಗಳಲ್ಲಿ ಕರೆದಿರುವ ಕರ್ನಾಟಕ ಬಂದ್ ನಲ್ಲಿ ಭಾಗವಹಿಸುವುದಾಗಿ ಹೇಳಿದರು.
ಕನ್ನಡಿಗರಿಗೆ ಮಲತಾಯಿ ಧೋರಣೆ ಮಾಡುತ್ತಿರುವ ಯಡಿಯೂರಪ್ಪ, ಮರಾಠರನ್ನು ಓಲೈಸಲು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಪ್ರಾಧಿಕಾರಕ್ಕಾಗಿ ಮೀಸಲಿಟ್ಟ 50 ಕೋಟಿ ಹಣ ಯಾರದ್ದು, ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೀಸಲಿಟ್ಟಿರುವ ಹಣ ರೈತರಿಗೆ ನೆರೆ ಸಂತ್ರಸ್ತರಿಗೆ ಕೊಡಿ ಎಂದು ಆಗ್ರಹಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel