ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಈ ಫಲಿತಾಂಶ ಪ್ರಜಾಪ್ರಭುತ್ವದ ಸೋಲಾಗಿದ್ದು, ಕೇವಲ ಯಂತ್ರಗಳಿಗೆ ಸಿಕ್ಕ ಗೆಲುವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳಿಂದ ನಿತೀಶ್ ಕುಮಾರ್ ಹಾಗೂ 10 ವರ್ಷಗಳಿಂದ ಕೇಂದ್ರದಲ್ಲಿ ಮೋದಿ ಸರ್ಕಾರವಿದ್ದರೂ ಬಿಹಾರದಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ. ಈ ಬಾರಿ ಜನಾದೇಶ ಬದಲಾವಣೆ ಬಯಸಿತ್ತು, ಆದರೆ ಫಲಿತಾಂಶ ಮಾತ್ರ ಆಶ್ಚರ್ಯಕರವಾಗಿದೆ ಎಂದು ತೇಜಸ್ವಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಅವರ ಮಾತಿನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಮತದಾನಕ್ಕೂ ಮುನ್ನ 40 ಸಾವಿರ ಕೋಟಿ ರೂ. ಹಂಚಿಕೆ ಆರೋಪ
ಚುನಾವಣಾ ಫಲಿತಾಂಶದ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತೇಜಸ್ವಿ, 2020ರಲ್ಲಿ 75 ಕ್ಷೇತ್ರಗಳಲ್ಲಿ ಗೆದ್ದಿದ್ದ ಆರ್‌ಜೆಡಿ, 2025ರಲ್ಲಿ ಕೇವಲ 25ಕ್ಕೆ ಇಳಿದಿರುವುದನ್ನು ಯಾರೂ ನಂಬುತ್ತಿಲ್ಲ ಎಂದರು. ಜನರೇ ಈ ಸಂಖ್ಯೆ ನೋಡಿ ಆಘಾತಗೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಾಯಕರಿಗೂ ಗೆಲುವಿನ ವಿಶ್ವಾಸವಿರಲಿಲ್ಲ. ಆದರೆ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾನಕ್ಕೆ ಕೇವಲ 10 ದಿನಗಳ ಮುನ್ನ ವಿವಿಧ ಯೋಜನೆಗಳ ಹೆಸರಿನಲ್ಲಿ ಸುಮಾರು 40 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ಜನರಿಗೆ ಹಂಚಿಕೆ ಮಾಡಲಾಗಿದೆ. ಜನರಿಗೆ ತಲಾ 10 ಸಾವಿರ ರೂ. ತಲುಪಿಸುವ ಮೂಲಕ ಇದನ್ನು ಒಂದು ರೀತಿಯಲ್ಲಿ ಲಂಚದಂತೆ ನೀಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಚುನಾವಣೆ ಹೊತ್ತಲ್ಲೇ ಪಿಂಚಣಿ ಹೆಚ್ಚಳದ ತಂತ್ರ
ಬಿಹಾರದ ಜನರು ಶಿಕ್ಷಣ, ಉದ್ಯೋಗ, ವೈದ್ಯಕೀಯ ಸೌಲಭ್ಯ ಮತ್ತು ನೀರಾವರಿ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದ್ದರು. ನಮ್ಮ ಪ್ರಣಾಳಿಕೆಯಲ್ಲಿ ನಾವು ಪಿಂಚಣಿ ಹೆಚ್ಚಳದ ಭರವಸೆ ನೀಡಿದ್ದೆವು. ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದಾಗ ಪಿಂಚಣಿ ಹೆಚ್ಚಿಸದ ಸರ್ಕಾರ, ನಮ್ಮ ಭರವಸೆಯನ್ನು ನೋಡಿ ಭಯಗೊಂಡು ಚುನಾವಣೆ ಸಮೀಪಿಸುತ್ತಿದ್ದಂತೆಯೇ 400 ರೂ. ಪಿಂಚಣಿ ಹೆಚ್ಚಳ ಮಾಡಿತು. ನಮ್ಮ ಕನಸಿನ ಯೋಜನೆಗಳನ್ನು ಅವರು ಚುನಾವಣೆಗಾಗಿ ತರಾತುರಿಯಲ್ಲಿ ಜಾರಿಗೆ ತಂದರು ಎಂದು ತೇಜಸ್ವಿ ಲೇವಡಿ ಮಾಡಿದರು.
ಬಿಹಾರದ ಹಿನ್ನಡೆಗೆ ನೈಜ ಕಾರಣಗಳೇನು
ಬಿಹಾರ ದೇಶದ ಅತ್ಯಂತ ಬಡ ರಾಜ್ಯವಾಗಿದ್ದು, ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯುವ ಸಮುದಾಯಕ್ಕೆ ಉದ್ಯೋಗವಿಲ್ಲದೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಬಿಹಾರ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಯುವಕರ ಕೈಗೆ ಕೆಲಸ ಕೊಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತೇಜಸ್ವಿ ಯಾದವ್ ವಿಶ್ಲೇಷಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಮೈತ್ರಿಕೂಟದ ಆಡಳಿತವಿದ್ದರೂ ಬಿಹಾರಕ್ಕೆ ಯಾವುದೇ ಲಾಭವಾಗಿಲ್ಲ ಎಂದು ತೇಜಸ್ವಿ ಕಿಡಿಕಾರಿದರು. ಕಳೆದ 20 ವರ್ಷಗಳಿಂದ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ, ಕಳೆದ ದಶಕದಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ಇವರು ಭಾಷಣಗಳಲ್ಲಿ ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ, ರಾಜ್ಯದಲ್ಲಿ ಒಂದೇ ಒಂದು ಹೊಸ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಇವರಿಂದ ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಸೋತಿದೆ, ಮಷೀನ್ ಗಳು ಗೆದ್ದಿವೆ ಎಂದು ತೇಜಸ್ವಿ ಯಾದವ್ ತಮ್ಮ ಅಸಮಾಧಾನ ಹೊರಹಾಕಿದರು.








