ಮೂರನೇ ಬಾರಿಯೂ ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸನ್ ಅವರ ವಿವಾಹ ಮುಂದೂಡಿಕೆ
ಕೋಪೆನ್ ಹ್ಯಾಗನ್, ಜೂನ್ 27: ಡೆನ್ಮಾರ್ಕ್ ದೇಶದ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಅವರ ವಿವಾಹ ಇದೀಗ ಮೂರನೇ ಬಾರಿಯೂ ಮುಂದೂಡಿಕೆಯಾಗಿದೆ. ಈಗಾಗಲೇ ಎರಡು ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯ ಹಿನ್ನಲೆಯಲ್ಲಿ ಅವರು ತಮ್ಮ ವಿವಾಹವನ್ನು ಮುಂದೂಡಿದ್ದರು. ಇದೀಗ ಮೂರನೇ ಬಾರಿಯೂ ಅವರು ತಮ್ಮ ವಿವಾಹವನ್ನು ಮುಂದೂಡಿದ್ದು, ಅವರ ಮದುವೆ ನಿಗದಿಯಾಗಿರುವ ದಿನಾಂಕದಂದೇ ಯುರೋಪಿಯನ್ ಯೂನಿಯನ್ ಶೃಂಗಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರು ಈ ಬಾರಿ ತಮ್ಮ ವಿವಾಹವನ್ನು ಮುಂದೂಡಿದ್ದಾರೆ
ಈ ಅದ್ಭುತ ವ್ಯಕ್ತಿಯನ್ನು ಮದುವೆಯಾಗಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದು ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸೆನ್ ತನ್ನ ಮತ್ತು ತಾನು ಮದುವೆಯಾಗಲಿರುವ ಬೋ ಟೆಂಗ್‌ಬರ್ಗ್‌ನ ಫೋಟೋದೊಂದಿಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿರುವ ಅವರು, ಆದರೆ ನಿಸ್ಸಂಶಯವಾಗಿ ಅದು ಅಷ್ಟು ಸುಲಭವಾಗಿಲ್ಲ, ಮತ್ತು ಈಗ ಬ್ರಸೆಲ್ಸ್‌ನಲ್ಲಿ ಕೌನ್ಸಿಲ್ ಸಭೆ ಇದೆ, ಜುಲೈ ತಿಂಗಳ ಆ ಶನಿವಾರದಂದು ನಾವು ಮದುವೆಯಾಗಲು ಯೋಜಿಸಿದ್ದೆವು ಎಂದು ಬರೆದಿದ್ದಾರೆ.

ಆದರೆ ನಾನು ನನ್ನ ಕರ್ತವ್ಯ ಮಾಡಬೇಕು ಮತ್ತು ಡೆನ್ಮಾರ್ಕ್‌ನ ಹಿತಾಸಕ್ತಿಯನ್ನು ನೋಡಿಕೊಳ್ಳಬೇಕು. ಆದ್ದರಿಂದ ನಾವು ಮತ್ತೆ ಯೋಜನೆಗಳನ್ನು ಬದಲಾಯಿಸಬೇಕಾಗಿದೆ ಮತ್ತು ಶೀಘ್ರದಲ್ಲೇ ವಿವಾಹವಾಗಲಿದ್ದೇವೆ ಎಂದು ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸೆನ್ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಕೊರೊನಾ ವೈರಸ್ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳ 27 ಮುಖ್ಯಸ್ಥರು ಜುಲೈ 17-18ರಂದು ಮುಖಾಮುಖಿ ಭೇಟಿಯಾಗುವ ನಿರ್ಧಾರವನ್ನು ಕಳೆದ ವಾರ ನಡೆದ ವರ್ಚುವಲ್ ಸಭೆಯಲ್ಲಿ ಕೈಗೊಳ್ಳಲಾಗಿತ್ತು.








