ಬೆಂಗಳೂರು, ಮೇ 25 : ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರ ಸ್ವಚ್ಛತೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇನ್ನಷ್ಟು ಆದ್ಯತೆ ಕೊಡಲು ಮುಂದಾಗಿದ್ದಾರೆ. ಪೊಲೀಸರಿಗೆ ತುಂಬಾ ಎಚ್ಚರಿಕೆಯಿಂದ ಇರಲು ಸಲಹೆ ನೀಡಿರುವ ಪೊಲೀಸ್ ಆಯುಕ್ತರು, ಕಳೆದ ಎರಡು ತಿಂಗಳಿನಿಂದ ಕೊರೊನಾ ಜೊತೆ ಹೋರಾಟ ಮಾಡುತ್ತಾ ಇದ್ದೀವಿ. ಇಂತಹ ಸಂದರ್ಭದಲ್ಲಿ ಸ್ವಚ್ಛತೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಹೀಗಾಗಿ ಪೊಲೀಸ್ ಠಾಣೆಗಳಿಗೆ ವಾಷಿಂಗ್ ಮೆಷಿನ್ ಅಳವಡಿಸಲು ಇಲಾಖೆ ಮುಂದಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ನಾವು ಮಾರ್ಚ್ನಿಂದಲೇ ಎಲ್ಲಾ ಪೊಲೀಸ್ ಠಾಣೆಯಲ್ಲೂ ಜಾಗೃತಿ ಮೂಡಿಸಿದ್ದೇವೆ. ಆದರೆ ಈಗ ಕೊರೊನಾ ಎಂಬ ಮಹಾಮಾರಿ ಎಲ್ಲಾ ಕಡೆ ಬಲಿ ತೆಗೆದುಕೊಳ್ಳುತ್ತಿರುವುದರಿಂದ ಒಬ್ಬರನ್ನೊಬ್ಬರು ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. ಪೊಲೀಸರ ಸುರಕ್ಷತೆಯ ದೃಷ್ಟಿಯಿಂದ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪ್ರಾಯೋಗಿಕವಾಗಿ ಎರಡು ಪೊಲೀಸ್ ಠಾಣೆಗೆ ವಾಷಿಂಗ್ ಮೆಷಿನ್ ನೀಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೊರೊನಾ ಜೊತೆ ಹೋರಾಟ ಮಾಡುತ್ತಿರುವ ಪೊಲೀಸರು ಕರ್ತವ್ಯ ಮುಗಿದ ಬಳಿಕ ಮನೆಗೆ ತೆರಳುತ್ತಾರೆ. ಪೊಲೀಸ್ ಠಾಣೆಯಲ್ಲಿಯೇ ಸಮವಸ್ತ್ರದ ಸ್ವಚ್ಚತೆಗಾಗಿ ಬಿಸಿನೀರಿನಲ್ಲಿ ಬಟ್ಟೆ ಸ್ವಚ್ಛತೆ ಮಾಡಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಠಾಣೆಗಳಿಗೆ ವಾಷಿಂಗ್ ಮೆಷಿನ್ ಕೊಡಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.