ನೇತ್ರಾವತಿ ಹಾಗೂ ಸ್ವರ್ಣಾ ನದಿಯಲ್ಲಿ ಅಪಾಯಕಾರಿ ಪ್ರತಿಜೀವಕಗಳು ಪತ್ತೆ; ಅಧ್ಯಯನ ಹೊರಹಾಕಿದ ಆಘಾತಕಾರಿ ಸತ್ಯ:
ಮಂಗಳೂರು, ಅಗಸ್ಟ್31: ಕೇರಳದ ಇರಿಂಜಲಕುಡದಲ್ಲಿರುವ ಕ್ರೈಸ್ಟ್ ಎಂಜಿನಿಯರಿಂಗ್ ಕಾಲೇಜು, ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯ ಮತ್ತು ಜಪಾನ್ ರಾಷ್ಟ್ರೀಯ ಸಂಸ್ಥೆ ನಡೆಸಿದ ಇತ್ತೀಚೆಗಿನ ಅಧ್ಯಯನದಲ್ಲಿ ದಕ್ಷಿಣ ಕನ್ನಡದ ನೇತ್ರಾವತಿ ಮತ್ತು ಉಡುಪಿಯ ಸ್ವರ್ಣ ನದಿಗಳಲ್ಲಿ ಹಾನಿಕಾರಕ ಆ್ಯಂಟಿ ಬಯೋಟೆಕ್ ಅಂಶಗಳು ಕಂಡುಬಂದಿರುವುದನ್ನು ಪತ್ತೆ ಹಚ್ಚಲಾಗಿದೆ.
ಐದು ವರ್ಷಗಳಿಗಿಂತ ಹೆಚ್ಚು ಕಾಲ ನಡೆಸಿದ ಈ ಅಧ್ಯಯನದಲ್ಲಿ ಈ ಎರಡೂ ನದಿಗಳಲ್ಲಿ ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾದ ಟ್ರಿಮೆಥೊಪ್ರಿಮ್, ಸಲ್ಫಮೆಥೊಕ್ಸಜೋಲ್, ಕ್ಲೋರನ್ ಫೆನಿಕೋಲ್, ಸೆಪ್ಟಿಯೋನ್ ಮತ್ತು ನೆಪ್ರೇನ್ ಅಂಶಗಳನ್ನು ಪತ್ತೆ ಮಾಡಲಾಗಿದೆ. ಎರಡೂ ನದಿಗಳ ಆರು ವಿಭಿನ್ನ ತಾಣಗಳಿಂದ ನೀರಿನ ಮಾದರಿಗಳನ್ನು ಅಧ್ಯಯನಕ್ಕಾಗಿ ಸಂಗ್ರಹಿಸಲಾಗಿದ್ದು ನೇತ್ರಾವತಿಯಲ್ಲಿ ಪ್ರತಿಜೀವಕ ಅಂಶವು ಸ್ವರ್ಣ ನದಿಗಿಂತ ಹೆಚ್ಚಾಗಿದೆ ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲ ನದಿಗಳಲ್ಲಿ ಪ್ರತಿಜೀವಕಗಳ ಅಂಶವು ಬೇಸಿಗೆಯಲ್ಲಿ ಹೆಚ್ಚಾಗಿ ಮತ್ತು ಮಳೆಗಾಲದಲ್ಲಿ ಕಡಿಮೆ ಅಂಶ ಕಂಡು ಬಂದಿದೆ.
ನದಿಗಳಲ್ಲಿ ಪ್ರತಿಜೀವಕಗಳ ಅಂಶದ ಉಪಸ್ಥಿತಿ ಮತ್ತು ಹೆಚ್ಚಳಕ್ಕೆ, ತ್ಯಾಜ್ಯವನ್ನು ಈ ನದಿಗಳಿಗೆ ಎಸೆಯುವುದರ ಜೊತೆಗೆ ಕಾರ್ಖಾನೆಗಳಿಂದ ಸಂಸ್ಕರಿಸದ ತ್ಯಾಜ್ಯಗಳು ಈ ನದಿಗಳ ಒಡಲು ಸೇರಿರುವುದು ಕಾರಣವೆಂದು ಅಂದಾಜಿಸಲಾಗಿದೆ. ಈ ನದಿಗಳಲ್ಲಿನ ಪ್ರತಿಜೀವಕ ಮಟ್ಟವು ಈಗ ಅಪಾಯಕ್ಕಿಂತ ಕೆಳಗಿದ್ದರೂ, ಇದು ಸಮುದ್ರ ಜಲಚರಗಳ ಮೇಲೆ ಪರಿಣಾಮ ಬೀರಬಹುದು ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೂವಿಜ್ಞಾನ ಪ್ರಾಧ್ಯಾಪಕ ಕೆ ಬಾಲಕೃಷ್ಣ ಹೇಳಿದ್ದಾರೆ.
ಮುಂಬಯಿಯ ಭಾಬಾ ಪರಮಾಣು ಸಂಶೋಧನಾ ಕೇಂದ್ರವು ಈಗಾಗಲೇ ಪ್ರಯೋಗಗಳನ್ನು ನಡೆಸುತ್ತಿರುವ ವಿಕಿರಣದ ಮೂಲಕ ಪ್ರತಿಜೀವಕಗಳನ್ನು ನಾಶಪಡಿಸುವ ಸಾಧ್ಯತೆಯನ್ನೂ ಅವರು ಅಧ್ಯಯನ ಮಾಡುತ್ತಿದ್ದಾರೆ.








