ಸ್ವಂತ ಮಗಳನ್ನ ದೇವದಾಸಿ ಮಾಡುವುದಾಗಿ ಬೆದರಿಕೆ ಹಾಕಿದ ಪೋಷಕರು – ಮನೆ ಬಿಟ್ಟು ಓಡಿ ಹೋದ ಯುವತಿ..!
ರಾಯಚೂರು : ದೇವದಾಸಿಯಂತಹ ಅನಿಷ್ಠ ಪದ್ಧತಿ ನಿಷೇಧಗೊಮಡಿದ್ದು, ಕಾನೂನು ಬಾಹಿರವಾಗಿದ್ರೂ, ಇನ್ನೂ ಕೆಲವೆಡೆ ಇದು ಜಾರಿಯಲ್ಲಿದೆ.. ಆದ್ರೆ ಇಲ್ಲೊಬ್ಬ ಯುವತಿಯನ್ನ ಪೋಷಕರು ದೇವದಾಸಿಯನ್ನಾಗಿ ಮಾಡುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆ ಆಕೆ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ತನ್ನ ಸಹೋದರಿಯ ಗಂಡನನ್ನು ಮದುವೆಯಾಗುವಂತೆ ಪೋಷಕರು ಒತ್ತಾಯಿಸಿದ್ದು, ನಿರಾಕರಿಸಿದರೆ ದೇವದಾಸಿಯನ್ನಾಗಿ ಮಾಡಿ ದೇವಾಲಯಕ್ಕೆ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.. ಹೀಗಾಗಿ 20 ವರ್ಷದ ಯುವತಿ ಮನೆ ಬಿಟ್ಟು ಓಡಿಹೋಗಿದ್ದಾಳೆ.
ರಾಯಚೂರಿನ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದಲ್ಲಿರುವ ತನ್ನ ಮನೆಯಿಂದ ತಪ್ಪಿಸಿಕೊಂಡು ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದ್ರೆ ಪೋಷಕರು ಆಕೆ ಇರುವ ಸ್ಥಳವನ್ನು ಪತ್ತೆ ಮಾಡಿ ಸಂಬಂಧಿಕರಿಗೂ ಬೆದರಿಕೆ ಹಾಕಿದ್ದಾರೆ.
ಬಳಿಕ ಯುವತಿಯು ಜಾಲಹಳ್ಳಿ ಪೊಲೀಸರಿಗೆ ಪೋಷಕರ ವಿರುದ್ಧ ದೂರು ನೀಡಿದ್ದಾಳೆ. ಇತ್ತ ಯುವತಿಯ ವಿರುದ್ಧ ಪೋಷಕರು ಪ್ರತಿ-ದೂರು ದಾಖಲಿಸಿದ್ದು, ಆಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದು, ಮನೆಯಿಂದ ಹಣವನ್ನು ಪಡೆಯಲು ಪ್ಲಾನ್ ಮಾಡಿಕೊಂಡಿದ್ದಳು ಎಂದು ಆರೋಪಿಸಿದ್ದಾರೆ.
ಅಲ್ಲದೇ ಯುವತಿಯನ್ನು ತಮಗೆ ಹಸ್ತಾಂತರಿಸುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದರು. ಆದ್ರೆ ಯುವತಿ ತನ್ನ ಮನೆಗೆ ಮರಳಲು ನಿರಾಕರಿಸಿದ್ದು, ರಕ್ಷಣೆ ಕೋರಿದ್ದಾಳೆ. ಹೀಗಾಗಿ ಅವಳನ್ನು ರಾಯಚೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.








