ಬೆಂಗಳೂರು: ಸಾಮಾಜಿಕ ನ್ಯಾಯದ ಕುರಿತ ಲೇಖನದ ವಿಚಾರವಾಗಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಖಂಡಿತವಾಗಿಯೂ ಜಾತಿವಾದಿಗಳಲ್ಲ, ಅವರು ಪಕ್ಕಾ ಕುಟುಂಬವಾದಿಗಳು. ಅಧಿಕಾರಕ್ಕಾಗಿ ಸ್ವಜಾತಿಯ ನಾಯಕರನ್ನೇ ಬಲಿಕೊಟ್ಟ ಇತಿಹಾಸ ಅವರದ್ದು ಎಂದು ಸಿಎಂ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ನ್ಯಾಯದ ದಿನದ ಅಂಗವಾಗಿ ಸಿದ್ದರಾಮಯ್ಯ ಅವರು ಬರೆದಿದ್ದ ಲೇಖನ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಈ ಲೇಖನವನ್ನು ಟೀಕಿಸಿದ್ದ ಎಚ್.ಡಿ. ಕುಮಾರಸ್ವಾಮಿ, ಕುರ್ಚಿಗಾಗಿ ಸಿದ್ದರಾಮಯ್ಯ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ದೀರ್ಘವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಜೆಡಿಎಸ್ ನಾಯಕರ ಕುಟುಂಬ ರಾಜಕಾರಣದ ಬಣ್ಣ ಬಯಲು ಮಾಡಿದ್ದಾರೆ.
ಸ್ವಜಾತಿ ನಾಯಕರನ್ನೇ ಮುಗಿಸಿದ ಕುಟುಂಬ
ಜೆಡಿಎಸ್ ವರಿಷ್ಠರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಒಕ್ಕಲಿಗ ಜಾತಿ ಕೇವಲ ಒಂದು ಓಟ್ ಬ್ಯಾಂಕ್ ಅಷ್ಟೆ. ವಾಸ್ತವದಲ್ಲಿ ಅವರು ಸ್ವಜಾತಿ ವಿರೋಧಿಗಳು. ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ಸ್ವಜಾತಿಯ ನಾಯಕರು ಬೆಳೆಯದಂತೆ ತಡೆಯುತ್ತಾ, ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದಿದ್ದಾರೆ. ಹಿಂದೆ, ಇಂದು ಮತ್ತು ಮುಂದೆ ಜೆಡಿಎಸ್ ಪಕ್ಷದ ತುತ್ತತುದಿಯ ನಾಯಕರು ಗೌಡರ ಕುಟುಂಬದವರೇ ಆಗಿರುತ್ತಾರೆ ಎನ್ನುವುದು ಕಟುಸತ್ಯ ಎಂದು ಚಾಟಿ ಬೀಸಿದ್ದಾರೆ.
ದೇವೇಗೌಡರನ್ನು ಬಿಟ್ಟು ಬಂದವರ ಪಟ್ಟಿ ನೀಡಿದ ಸಿಎಂ
ತಮ್ಮ ಮಾತಿಗೆ ಪುಷ್ಠಿ ನೀಡಲು ಇತಿಹಾಸವನ್ನು ಕೆದಕಿದ ಸಿದ್ದರಾಮಯ್ಯ, ದೇವೇಗೌಡರು ಜೆಡಿಎಸ್ ಪಕ್ಷದಲ್ಲಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಹಾಸನದ ಪುಟ್ಟಸ್ವಾಮಿಗೌಡ, ಸಿ.ಎಸ್.ಪುಟ್ಟೇಗೌಡ, ಜವರೇಗೌಡ, ಕೆ.ಎಂ.ವಿಶ್ವನಾಥ್, ಹನುಮೇಗೌಡ, ಮಂಡ್ಯದ ಕೆ.ಎನ್.ನಾಗೇಗೌಡ, ವೈ.ಕೆ.ರಾಮಯ್ಯ, ಸಿ.ಬೈರೇಗೌಡ, ಬಚ್ಚೇಗೌಡ, ಬಿ.ಎಲ್.ಶಂಕರ್, ಸಿ.ನಾರಾಯಣಸ್ವಾಮಿ ಹಾಗೂ ಹಾಲಿ ಸಚಿವರಾದ ಚೆಲುವರಾಯ ಸ್ವಾಮಿ ಸೇರಿದಂತೆ ಅನೇಕ ಪ್ರಮುಖ ಒಕ್ಕಲಿಗ ನಾಯಕರು ದೇವೇಗೌಡರನ್ನು ಬಿಟ್ಟು ಏಕೆ ಹೊರಬಂದರು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್ ಮಾತ್ರ
ಒಕ್ಕಲಿಗ ಸಮುದಾಯಕ್ಕೆ ನಿಜವಾದ ರಾಜಕೀಯ ಶಕ್ತಿ ತುಂಬಿದ್ದು ಕಾಂಗ್ರೆಸ್ ಪಕ್ಷ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣ ಅವರವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಕಾಂಗ್ರೆಸ್ ಬೆಳೆಸಿದೆ. ಕಡಿದಾಳ್ ಮಂಜಪ್ಪ, ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಗಳಾಗಲು ಕಾಂಗ್ರೆಸ್ ಕಾರಣ. ಇಂದಿಗೂ ಒಕ್ಕಲಿಗ ಸಮುದಾಯದ ಸಮರ್ಥ ನಾಯಕರಾದ ಡಿ.ಕೆ.ಶಿವಕುಮಾರ್, ಕೃಷ್ಣಬೈರೇಗೌಡ, ಟಿ.ಬಿ.ಜಯಚಂದ್ರ ಅವರಂತಹವರ ದೊಡ್ಡ ಪಟ್ಟಿಯೇ ಕಾಂಗ್ರೆಸ್ ಬಳಿಯಿದೆ. ಮುಂದೊಂದು ದಿನ ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಯಾರಾದರೂ ಒಕ್ಕಲಿಗರು ರಾಜ್ಯದ ಮುಖ್ಯಮಂತ್ರಿಗಳಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಭವಿಷ್ಯ ನುಡಿದಿದ್ದಾರೆ.
ದಲಿತ ಸಿಎಂ ಕನಸು ನನಸಾಗುವುದೂ ಕಾಂಗ್ರೆಸ್‌ನಿಂದಲೇ
ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ, ದಲಿತ ಸಮುದಾಯದ ನಾಯಕರು ಜಾತಿಯ ಹಂಗಿಲ್ಲದೆ, ಕೇವಲ ಅರ್ಹತೆಯ ಬಲದಿಂದ ಮುಖ್ಯಮಂತ್ರಿಯಾಗುವ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇದೆ. ಮುಂದೊಂದು ದಿನ ದಲಿತ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾದರೆ, ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾನು ಹಿಂದುಳಿದ ವರ್ಗಕ್ಕೆ ಸೇರಿದ್ದರೂ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಗುರುತಿಸಿ ಎರಡು ಬಾರಿ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ್ದಾರೆ ಎಂದು ಇದೇ ವೇಳೆ ಸ್ಮರಿಸಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ಬದ್ಧ
ತಮ್ಮ ಲೇಖನದ ಬಗೆಗಿನ ಚರ್ಚೆಯನ್ನು ಸ್ವಾಗತಿಸುವುದಾಗಿ ಹೇಳಿದ ಸಿಎಂ, ನೀರು ನಿಂತರೆ ಕೆಸರಾಗುತ್ತದೆ, ಹರಿಯುತ್ತಿದ್ದರೆ ತಿಳಿಯಾಗುತ್ತದೆ. ಸಮಾಜ ಕೂಡ ಹಾಗೆಯೇ, ಚಲನಶೀಲತೆ ಇದ್ದರೆ ಮಾತ್ರ ಪರಿವರ್ತನೆ ಸಾಧ್ಯ. ಅಧಿಕಾರ ಇರಲಿ, ಇಲ್ಲದಿರಲಿ ಸಾಮಾಜಿಕ ನ್ಯಾಯದ ಪರವಾದ ನನ್ನ ನಿಲುವು ಅಚಲ. ನನ್ನನ್ನು ಟೀಕಿಸುವವರಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದೆ. ನಾನು ಯಾವುದೇ ಸಾರ್ವಜನಿಕ ಸಂವಾದಕ್ಕೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿಯವರ ಟೀಕೆಗೆ ಅಂಕಿಅಂಶ ಹಾಗೂ ಇತಿಹಾಸದ ಸಮೇತ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಜೆಡಿಎಸ್ ಕೇವಲ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲು ಯತ್ನಿಸಿದ್ದಾರೆ.








