ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಸಿನಿರಸಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ದರ್ಶನ್ ಅವರ ಮಾಸ್ ಅವತಾರ ಮತ್ತು ಖಡಕ್ ಡೈಲಾಗ್ ಗಳು ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿವೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರು ಈ ಟ್ರೇಲರ್ ಮೂಲಕ ತಮ್ಮ ಇರುವಿಕೆಯನ್ನು ಬಲವಾಗಿ ಸಾಬೀತುಪಡಿಸಿದ್ದಾರೆ. ಟ್ರೇಲರ್ ನಲ್ಲಿ ದರ್ಶನ್ ವಿಲನ್ ಶೇಡ್ ನಲ್ಲಿ ಅಬ್ಬರಿಸಿದ್ದು ಪ್ಲೇ ಬಾಯ್ ಆಗಿ ಹಾಗೂ ರೊಮ್ಯಾಂಟಿಕ್ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನ ಹೈಲೈಟ್ ಎಂದರೆ ಅದರಲ್ಲಿರುವ ಪವರ್ ಫುಲ್ ಸಂಭಾಷಣೆಗಳು.
ಅಭಿಮಾನಿಗಳ ಪಾಲಿನ ಮಂತ್ರವಾದ ಆ ಡೈಲಾಗ್
ಟ್ರೇಲರ್ ನಲ್ಲಿ ದರ್ಶನ್ ಹೇಳಿರುವ ಒಂದು ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ ನಾನು ಬರ್ತಿದ್ದೀನಿ ಚಿನ್ನ ಎಂದು ದರ್ಶನ್ ಹೇಳುವ ಡೈಲಾಗ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಪ್ರಸ್ತುತ ದರ್ಶನ್ ಜೈಲಿನಲ್ಲಿರುವ ಸಂದರ್ಭಕ್ಕೆ ಈ ಡೈಲಾಗ್ ಅನ್ನು ಹೋಲಿಕೆ ಮಾಡುತ್ತಿರುವ ಅಭಿಮಾನಿಗಳು ಇದು ಸಿನಿಮಾದ ಡೈಲಾಗ್ ಮಾತ್ರವಲ್ಲ ನಿಜ ಜೀವನದ ಮಾತು ಈ ಮಾತು ನಿಜವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಗಮನ ಸೆಳೆದ ಗಿಲ್ಲಿಯ ಪಂಚ್
ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟರಾಜ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯ ದೃಶ್ಯದಲ್ಲಿ ಪೊಲೀಸ್ ಅಧಿಕಾರಿಯ ಎದುರು ಕುಳಿತು ಎಕ್ಸ್ ಕ್ಯೂಸ್ ಮೀ ಪಿಸಿ ಸ್ವಲ್ಪ ಹಾಕಮ್ಮ ಎಸಿ ಲಾಟ್ಸ್ ಆಫ್ ಸೆಖೆ ಎಂದು ಹೇಳುವ ಡೈಲಾಗ್ ನೋಡುಗರಲ್ಲಿ ನಗು ತರಿಸುವುದರ ಜೊತೆಗೆ ಮಾಸ್ ಮಜಾ ನೀಡಿದೆ. ಹಿರಿಯ ನಟ ಶೋಭರಾಜ್ ಪೊಲೀಸ್ ಅಧಿಕಾರಿಯಾಗಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಡೆವಿಲ್ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ರಚನಾ ರೈ ನಟಿಸಿದ್ದು ಅವರ ಕೆಮಿಸ್ಟ್ರಿ ವರ್ಕ್ ಔಟ್ ಆಗಿದೆ. ಉಳಿದಂತೆ ಮಹೇಶ್ ಮಂಜ್ರೇಕರ್ ಅಚ್ಯುತ್ ಕುಮಾರ್ ಶರ್ಮಿಳಾ ಮಾಂಡ್ರೆ ವಿನಯ್ ಗೌಡ ಮುಂತಾದ ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಚಿತ್ರದ ತೂಕವನ್ನು ಹೆಚ್ಚಿಸಿದ್ದು ಹಿನ್ನೆಲೆ ಸಂಗೀತ ಟ್ರೇಲರ್ ಗೆ ಮತ್ತಷ್ಟು ಕಿಕ್ ನೀಡಿದೆ. ಪ್ರಕಾಶ್ ಹಾಗೂ ಜಯಮ್ಮ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ.
ದರ್ಶನ್ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಯಾಗಿರುವ ಡೆವಿಲ್ ಟ್ರೇಲರ್ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆಕ್ಷನ್ ಕಾಮಿಡಿ ರೊಮ್ಯಾನ್ಸ್ ಪಾಲಿಟಿಕ್ಸ್ ಹಾಗೂ ರಿವೇಂಜ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ದರ್ಶನ್ ಜೈಲಿನಲ್ಲಿರುವುದರಿಂದ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.








