ಕೇರಳದಲ್ಲಿ ಭಕ್ತರಿಗೆ ಮತ್ತೊಮ್ಮೆ ದೇವರ ದರ್ಶನಕ್ಕೆ ನಿರ್ಬಂಧ
ತಿರುವನಂತಪುರಂ, ಜೂನ್ 19: ಲಾಕ್ ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗಿದ್ದು, ರಾಜ್ಯಗಳಲ್ಲಿ ಆತಂಕ ಮನೆಮಾಡಿದೆ. ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಹಿನ್ನಲೆಯಲ್ಲಿ ಮತ್ತೊಮ್ಮೆ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಿದೆ. ಈ ಕುರಿತಾಗಿ ಕೇರಳ ದೇವಸ್ವಂ ಮಂಡಳಿ ನಿರ್ಧಾರ ತೆಗೆದುಕೊಂಡಿದ್ದು, ಜೂನ್ ಅಂತ್ಯದವರೆಗೆ ದೇವಸ್ಥಾನಗಳಿಗೆ ಭಕ್ತರ ಪ್ರವೇಶವನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ. ದೇವಸ್ಥಾನಗಳಲ್ಲಿ ಪ್ರತಿ ನಿತ್ಯದ ಪೂಜೆ ನಡೆಯಲಿದೆ ಆದರೆ ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನಿರಾಕರಣೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಕೇರಳ ದೇವಸ್ವಂ ಮಂಡಳಿಯು ಈ ನಿರ್ಧಾರ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಕೇರಳ ದೇವಸ್ವಂ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ದೇವಸ್ಥಾನಗಳಿಗೆ ಮಾತ್ರ ಈ ಆದೇಶ ಅನ್ವಯಿಸುತ್ತದೆ. ಚರ್ಚ್, ಮಸೀದಿ ಮತ್ತು ಇತರ ಧಾರ್ಮಿಕ ಕೇಂದ್ರಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
ಕೇಂದ್ರ ಸರ್ಕಾರವು ಜೂನ್ 8ನೇ ತಾರೀಕಿನಿಂದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದ್ದು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿತ್ತು. ಆದರೆ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಕೇರಳ ದೇವಸ್ವಂ ಮಂಡಳಿಯು ಮುಂಜಾಗ್ರತಾ ಕ್ರಮವಾಗಿ ಮತ್ತೊಮ್ಮೆ ದೇವಸ್ಥಾನಗಳಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲು ತೀರ್ಮಾನ ಮಾಡಿದೆ.
ಕೇರಳದಲ್ಲಿ 2698 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 1324 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 1352 ಸಕ್ರಿಯ ಪ್ರಕರಣಗಳು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.