ನದಿ ದಾಟುವಾಗ ಭಕ್ತರು ಕೊಚ್ಚಿಕೊಂಡು ಹೋಗಿರುವ ಶಂಕೆ – Saaksha Tv
ರಾಮನಗರ : ಭಕ್ತರು ಕಾವೇರಿ ನದಿ ದಾಟುವ ವೇಳೆ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿರುವ ಶಂಕಾಸ್ಪದ ಘಟನೆ ಬೊಮ್ಮಸಂದ್ರದ ಬಳಿ ನಡೆದಿದೆ.
ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಆಚರಣೆಗೆ ಕಾಲ್ನಡಿಗೆ ಮೂಲಕ ಮಹಾದೇಶ್ವರ ಬೆಟ್ಟಕ್ಕೆ ಕನಕಪುರ ತಾಲೂಕಿನ ಸಂಗಮ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ನೀರಿನ ಸೆಳತಕ್ಕೆ ಭಕ್ತರು ಕೊಚ್ಚಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಇದರಲ್ಲಿ ಹಲವರನ್ನು ರಕ್ಷಿಸಿದ್ದು ಇನ್ನೂ ಹಲವು ಭಕ್ತರು ನದಿಯಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ರಾಮನಗರ ಜಿಲ್ಲೆ ಸೇರಿದಂತೆ ಬೆಂಗಳೂರಿನ ನಾನಾ ಭಾಗದಿಂದ ಸಾವಿರಾರು ಭಕ್ತರು ಮಹಾದೇಶ್ವರಸ್ವಾಮಿ ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ, ಕನಕಪುರ, ದೊಡ್ಡ ಆಲಹಳ್ಳಿ, ಏಳಗಳ್ಳಿ, ಹೆಗ್ಗನೂರು, ಕುಪ್ಪೆದೊಡ್ಡಿ ಮಾರ್ಗವಾಗಿ ಸಂಗಮ ಬಳಿಯ ಬೊಮ್ಮಸಂದ್ರ ಬಳಿ ಕಾವೇರಿ ನದಿ ದಾಟಿಕೊಂಡು ಮಹಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದರು. ಹಲವು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ಮಹಾದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಸಾವಿರಾರು ಭಕ್ತರಿಗೆ ಅರಣ್ಯ ಇಲಾಖೆಯಿಂದ ಆಗಲಿ ಪೊಲೀಸ್ ಇಲಾಖೆ ಅಥವಾ ತಾಲೂಕು ಆಡಳಿತದಿಂದ ವತಿಯಿಂದ ನದಿ ದಾಟಲು ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಈ ರೀತಿಯ ಅವಗಡ ಸಂಭವಿಸಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ವೃದ್ಧೆಯೊಬ್ಬರ ಶವ ಕಾವೇರಿ ನದಿಯ ಬಳಿ ಪತ್ತೆಯಾಗಿದ್ದು, ಇನ್ನೂ ಹಲವು ಭಕ್ತರು ಬೊಮ್ಮಸಂದ್ರದ ಬಳಿ ಕಾವೇರಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂದು ಹೇಳಲಾಗುತ್ತಿದೆ.