ತುಮಕೂರು: ಊಟ ನೀಡಿಲ್ಲ ಎಂಬ ಕಾರಣಕ್ಕೆ ಡಾಬಾ ಮಾಲೀಕನಿಗೆ ಕುಡುಕರ ಗ್ಯಾಂಗ್ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಕುಣಿಗಲ್ (Kunigal) ತಾಲ್ಲೂಕಿನಲ್ಲಿರುವ ಭಕ್ತರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾಜ್ಯ ಹೆದ್ದಾರಿ 33ರ ಭಕ್ತರಹಳ್ಳಿ ಹತ್ತಿರ ಇರುವ ಹೈವೇ ಟೂರಿಸ್ಟ್ ಡಾಬಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಸುಮಾರು 8 ಜನರಿದ್ದ ಕುಡುಕರ ಗ್ಯಾಂಗ್ ತಡರಾತ್ರಿ 12ರ ವೇಳೆಗೆ ಕಂಠ ಪೂರ್ತಿ ಕುಡಿದು ಡಾಬಾಗೆ ಬಂದಿತ್ತು. ಈ ಸಂದರ್ಭದಲ್ಲಿ ಸರಿಯಾಗಿ ಊಟ ನೀಡಿಲ್ಲ ಎಂದು ಅಡುಗೆ ಭಟ್ಟ ಶರತ್‌ಗೆ ಚಾಕುವಿನಿಂದ ಇರಿದಿದ್ದಾರೆ. ಮಾಲೀಕನಿಗೆ ಮನಬಂದಂತೆ ಥಳಿಸಿ ಪುಂಡಾಟ ನಡೆಸಿದ್ದಾರೆ. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ನಾಲ್ವರು ಕುಡುಕರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶರತ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








