ಲಾಕ್ ಡೌನ್ ಸಡಿಲಿಕೆ: ಇಂದಿನಿಂದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನ
ಇಂದಿನಿಂದ ಸಿನಿಮಾ ಮಂದಿರಗಳು , ಪಬ್ ಗಳ ಹೊರತಾಗಿ ಉಳಿದ ಬಹುತೇಕ ಎಲ್ಲಾ ಚಟುವಟಿಕೆಗಳು ಎಂದಿನಂತೆ ಆರಂಭವಾಗಿದೆ.. ಲಾಕ್ ಡೌನ್ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರವು , ದೇವಸ್ತಾನಗಳನ್ನ ತೆರೆಯುವುದಕ್ಕೂ ಅವಕಾಶ ನೀಡಿದೆ.. ಹೀಗಾಗಿ ರಾಜ್ಯದ ಎಲ್ಲಾ ಶ್ರೀ ಕ್ಷೇತ್ರಗಳಲ್ಲೂ ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಂಡು ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ..
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ , ಸಿಗಂಧೂರು ಚೌಡೇಶ್ವರಿ ದೇವಾಲಯ ಸೇರಿದಂತೆ ಬಹುತೇಕ ಮಂದಿರಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.. ಆದ್ರೆ ಉಡುಪಿಯ ಕೃಷ್ಣ ಮಠ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಒಂದು ವಾರ ಪರಿಸ್ಥಿತಿ ನೋಡಿಕೊಂಡು ದೇವಸ್ಥಾನದ ಬಾಗಿಲು ತೆರೆಯಬೇಕೆ, ಬೇಡವೆ ಎಂಬ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ, ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯಗಳಲ್ಲಿ ಪ್ರವೇಶಕ್ಕೆ ನಿರ್ಬಂಧ ಮುಂದುವರಿಕೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಜೋಗುಳಭಾವಿ ಸತ್ತೆಮ್ಮದೇವಿ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭಾನುವಾರ ಆದೇಶಿಸಿದ್ದಾರೆ. ಯಲ್ಲಮ್ಮ ದೇವಸ್ಥಾನಕ್ಕೆ ನೆರೆಯ ಮಹಾರಾಷ್ಟ್ರದ ಭಕ್ತರು ಹೆಚ್ಚಾಗಿ ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ದರ್ಶನ ನಿಷೇಧ ಮುಂದುವರಿಸಲಾಗಿದೆ. ಆ ರಾಜ್ಯದಲ್ಲಿ ಕೋವಿಡ್ ಮತ್ತು ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಉಳಿದಂತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ,ಶೃಂಗೇರಿ ಶಾರದಾಂಬೆ ದೇಗುಲ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನಗಳಲ್ಲೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರು ಕೋವಿಡ್ ನಿಯಮಾವಳಿ ಪಾಲಿಸುವುದು ಕಡ್ಡಾಯ ಎಂದು ಎಲ್ಲ ದೇವಸ್ಥಾನಗಳ ಸಮಿತಿಗಳು ತಿಳಿಸಿವೆ.