ನಂಬಿಕೆ….! ಇದು ಶಿಖರ್ ಧವನ್ – ರೋಹಿತ್ ಶರ್ಮಾ ಯಶಸ್ಸಿನ ಗುಟ್ಟು…!
ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ.. ಟೀಮ್ ಇಂಡಿಯಾದ ಯಶಸ್ವಿ ಆರಂಭಿಕ ಜೋಡಿ. ಸಚಿನ್ -ಗಂಗೂಲಿ, ಸಚಿನ್ -ಸೆಹ್ವಾಗ್, ಸೆಹ್ವಾಗ್ – ಗಂಭೀರ್ ನಂತರ ಧವನ್ ಮತ್ತು ರೋಹಿತ್ ಟೀಮ್ ಇಂಡಿಯಾದ ಆರಂಭಿಕ ಜೋಡಿಯಾಗಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡ್ತಾ ಇದ್ದಾರೆ.
ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ 16 ಶತಕಗಳ ಜೊತೆಯಾಟವನ್ನು ಆಡಿರುವ ಧವನ್ ಮತ್ತು ಶರ್ಮಾ, ಗಿಲ್‍ಕ್ರಿಸ್ಟ್ ಮತ್ತು ಮ್ಯಾಥ್ಯೂ ಹೆಡನ್ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ಮತ್ತು ಗಂಗೂಲಿ 21 ಬಾರಿ ಶತಕದ ಜೊತೆಯಾಟವನ್ನು ಆಡಿ ಅಗ್ರ ಸ್ಥಾನದಲ್ಲಿದ್ದಾರೆ. 2013ರಿಂದ ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಕಳೆದ ಆರೇಳು ವರ್ಷಗಳಿಂದ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ಮಾತ್ರ ವಹಿಸಿದ್ದರು.
ಹಾಗಾದ್ರೆ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರ ಯಶಸ್ಸಿನ ಗುಟ್ಟೇನು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗೇ ಉತ್ತರ ನೀಡಿದವರು ಕೂಡ ಶಿಖರ್ ಧವನ್. ಅದು ಕೇವಲ ನಂಬಿಕೆಯಷ್ಟೇ.. ಪರಸ್ಪರ ಒಬ್ಬರ ನಡುವೆ ಮತ್ತೊಬ್ಬರ ನಂಬಿಕೆಯಿಂದಲೇ ನಾವು ಯಶಸ್ಸಿಯಾಗಲು ಸಾಧ್ಯವಾಗಿದ್ದು ಅಂತಾರೆ ಶಿಖರ್ ಧವನ್.
ನನಗೆ ರೋಹಿತ್ ಶರ್ಮಾ 19 ವಯೋಮಿತಿ ಆಡುತ್ತಿರುವಾಗಲೇ ಗೊತ್ತು. ಆತ ನನಗಿಂತ ಒಂದೆರಡು ವರ್ಷ ಜ್ಯೂನಿಯರ್. ಆದ್ರೂ ನಾವಿಬ್ಬರು ಜೊತೆಯಾಗಿದ್ದೇವೆ. ನಮ್ಮಿಬ್ಬರ ಮಧ್ಯೆ ಗಾಢವಾದ ನಂಬಿಕೆ ಇದೆ. ವಿಶ್ವಾಸವಿದೆ. ಅದೇ ರೀತಿ ಸ್ನೇಹವೂ ಇದೆ. ಇದು ನಮ್ಮ ಯಶಸ್ಸಿನ ಸೂತ್ರವಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್‍ಸ್ಟಾಗ್ರಾಂ ಲೈವ್ ಕಾರ್ಯಕ್ರಮದಲ್ಲಿ ಶಿಖರ್ ಧವನ್ ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ನಮ್ಮಿಬ್ಬರ ಸ್ವಭಾವ ಮತ್ತು ವರ್ತನೆ ಕೂಡ ಒಂದೇ ರೀತಿ ಇದೆ. ಆತ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ನಾವು ಯಾವಾಗಲೂ ಧನತ್ಮಾಕವಾಗಿ ಯೋಚನೆ ಮಾಡಲು ಸಾಧ್ಯವಾಗುತ್ತದೆ. ನನ್ನ ಬ್ಯಾಟಿಂಗ್ ನಲ್ಲಿ ಏನಾದ್ರೂ ಸಮಸ್ಯೆಗಳಾದಾಗ ನಾನು ಆತನಲ್ಲಿ ಕೇಳುತ್ತೇನೆ. ನಮ್ಮಿಬ್ಬರ ನಡುವೆ ಉತ್ತಮವಾದ ಸಂವಹನವಿದೆ. ವರ್ಷದ 365 ದಿನಗಳಲ್ಲಿ 230 ದಿನಗಳು ಜೊತೆಯಾಗಿರುತ್ತೇವೆ. ಹೀಗಾಗಿಯೇ ಟೀಮ್ ಇಂಡಿಯಾ ಒಂದು ದೊಡ್ಡ ಕುಟುಂಬದಂತಿದೆ ಎಂಬುದು ಶಿಖರ್ ಧವನ್ ಮಾತು.
ಇನ್ನು ಎಂಟು ವರ್ಷಗಳ ಕಾಲ ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡಿದ್ದೆ. ಕಳೆದ ಬಾರಿ ಧವನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಏಳು ವರ್ಷಗಳ ನಂತರ ಮೊದಲ ಬಾರಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
ತವರಿನ ತಂಡ ಐಪಿಎಲ್ ಗೆಲ್ಲಬೇಕು ಅನ್ನೋದು ನನ್ನ ಆಸೆ. ಹಾಗೇ ನಮ್ಮ ತಂಡ ಕೂಡ ಬಲಿಷ್ಠವಾಗಿದೆ. ಹೀಗಾಗಿ ನಾವು ಐಪಿಎಲ್ ಗೆಲ್ಲುತ್ತೇವೆ. ಮತ್ತೊಂದೆಡೆ ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿಯವರಿಂದ ಸಾಕಷ್ಟು ಕಲಿತಿದ್ದೇನೆ. ಅವರಿಬ್ಬರು ಶ್ರೇಷ್ಠ ಆಟಗಾರರು, ಅದ್ಭುತ ನಾಯಕರು. ತಂಡದ ಯಶಸ್ಸಿಗೆ ಅವರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದ್ರು ಶಿಖರ್ ಧವನ್.








