ಟ್ರಾಕ್ಟರ್ ಮಾಲೀಕನಾದ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ,ಎಸ್. ಧೋನಿ…!
ಕ್ರಿಕೆಟ್ ಅನ್ನೋದು ಧೋನಿ ಬಾಳಿನಲ್ಲಿ ಬಯಸದೇ ಬಂದ ಭಾಗ್ಯ. ಫುಟ್‍ಬಾಲ್ ಗೋಲ್ ಕೀಪರ್ ಆಗಿದ್ದ ಧೋನಿ ವಿಕೆಟ್ ಕೀಪರ್ ಆಗಿದ್ದು ಈಗ ಇತಿಹಾಸ. ಹೊಡಿಬಡಿ ಆಟದ ಜೊತೆ ವಿಕೆಟ್ ಕೀಪಿಂಗ್ ಮಾಡುತ್ತಾ ಟೀಮ್ ಇಂಡಿಯಾದೊಳಗೆ ಸೇರಿಕೊಂಡು ಸುಮಾರು 16 ವರ್ಷಗಳಾಗಿವೆ. ಆ ನಂತರ ಟೀಮ್ ಇಂಡಿಯಾ ನಾಯಕನಾಗಿ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್, 2011ರ ವಿಶ್ವಕಪ್, ಐಸಿಸಿ ಚಾಂಪಿಯನ್‍ಷಿಪ್, ನಂಬರ್ ವನ್ ಟೆಸ್ಟ್ ತಂಡ ಹೀಗೆ ಧೋನಿಯ ಹಿಂದೆ ಸಾಧನೆಗಳ ಪಟ್ಟಿಯೇ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿದೆ.
ಇದೀಗ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದ ಧೋನಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೆ ಕೊರೋನಾ ವೈರಸ್‍ನಿಂದಾಗಿ ಈಗ ಧೋನಿಯ ಕ್ರಿಕೆಟ್ ಬದುಕು ಕೂಡ ಅತಂತ್ರವಾಗಿದೆ. ಆದ್ರೆ ಧೋನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನ ರಾಂಚಿಯ ಮನೆ, ಎಸ್ಟೇಟ್ ನಲ್ಲಿ ಮಗಳ ಜೊತೆ ಆಟವಾಡುತ್ತಿದ್ದಾರೆ. ಕುಟುಂಬದ ಜೊತೆ ಹಾಯಾಗಿದ್ದಾರೆ.
ಇನ್ನೊಂದು ವಿಚಾರ ನಿಮಗೆ ಗೊತ್ತೆ ಇದೆ. ಧೋನಿ ಬೈಕ್ ಪ್ರಿಯ. ಮನೆಯಲ್ಲಿ ವಿವಿಧ ಕಂಪೆನಿಗಳ ವಿವಿಧ ಮಾಡೆಲ್‍ಗಳ ಬೈಕ್‍ಗಳನ್ನು ನಿಲ್ಲಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ಬೈಕ್ ಸವಾರಿ ಮಾಡುವುದು ಅಂದ್ರೆ ಧೋನಿಗೆ ಎಲ್ಲಿಲ್ಲದ ಪ್ರೀತಿ. ಹಾಗೇ ಬೈಕ್‍ಗಳನ್ನು ಅಲಂಕಾರ
ಮಾಡಿಕೊಂಡು ಎಲ್ಲರಿಗಿಂತ ಭಿನ್ನವಾಗಿರುತ್ತಾರೆ. ಇನ್ನು ಕಾರುಗಳು ಕೂಡ ಅಷ್ಟೇ. ಬಿಂದಾಸ್ ಪ್ರಯಾಣ ಮಾಡುವುದನ್ನು ಧೋನಿ ತುಂಬಾನೇ ಇಷ್ಟಪಡುತ್ತಾರೆ. ಇದೀಗ ಧೋನಿ ಮನೆಯೊಳಗೆ ಹೊಸ ಆತಿಥಿಯಾಗಿ ಎಂಟ್ರಿಯಾಗಿದೆ.
ಹೌದು, ಮಹೇಂದ್ರ ಸಿಂಗ್ ಧೋನಿಯವರು ಈಗ ಟ್ರಾಕ್ಟರ್‍ನ ಮಾಲೀಕರು ಆಗಿದ್ದಾರೆ. ತನ್ನ ಎಸ್ಟೇಟ್‍ಗಾಗಿ ಹೊಸದಾಗಿ ಟ್ರಾಕ್ಟರ್ ಖರೀದಿ ಮಾಡಿದ್ದಾರೆ. ಸ್ವತಃ ತಾವೇ ಟ್ರಾಕ್ಟರ್ ಡ್ರೈವ್ ಮಾಡಿಕೊಂಡು ಎಸ್ಟೇಟ್‍ನಲ್ಲಿ ಸುತ್ತಾಟ ನಡೆಸಿದ್ದಾರೆ.








