ಧೋನಿಯ ತಂತ್ರಗಾರಿಕೆಯನ್ನು ಪಾಲಿಸಿದ್ರೆ ಸಾಕು… ವಿಕೆಟ್ ಸಿಕ್ಕೇ ಸಿಗುತ್ತೆ – ಯುಜುವೇಂದ್ರ ಚಾಹಲ್
ಮಹೇಂದ್ರ ಸಿಂಗ್ ಧೋನಿ ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಧೋನಿಯ ಮುಂದಿನ ಕ್ರಿಕೆಟ್ ಭವಿಷ್ಯ ಏನು ಎಂಬುದರ ಬಗ್ಗೆನೇ ಚರ್ಚೆ ನಡೆಯುತ್ತಿದೆ. ಆದ್ರೆ ಧೋನಿ ಮಾತ್ರ ಹಾಯಾಗಿ ತನ್ನ ರಾಂಚಿಯ ಫಾರ್ಮ್ ಹೌಸ್ನಲ್ಲಿ ಕೃಷಿಕನಾಗಿ ಕೆಲಸ ಮಾಡುತ್ತಿದ್ದಾರೆ.
ಹೌದು, ಧೋನಿಯ ಆಟವನ್ನು ಅವರ ಅಭಿಮಾನಿಗಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಯಾಕೆ ಟೀಮ್ ಇಂಡಿಯಾ ತಂಡವೇ ಧೋನಿಯವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಅದ್ರಲ್ಲೂ ಸ್ಪಿನ್ ಬೌಲರ್ಗಳಾದ ಯುಜುವೆಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಧೋನಿಯ ತಂತ್ರಗಾರಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಧೋನಿ ಹೇಳಿದಂತೆ ಬೌಲಿಂಗ್ ಮಾಡುತ್ತಿದ್ದ ಚಾಹಲ್ ಮತ್ತು ಕುಲದೀಪ್ ವಿಕೆಟ್ ಕೂಡ ಕಬಳಿಸುತ್ತಿದ್ದರು.
ಇತ್ತೀಚೆಗೆ ಕುಲದೀಪ್ ಯಾದವ್ ಧೋನಿಯ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ್ದರು. ಇದೀಗ ಯುಜುವೇಂದ್ರ ಚಾಹಲ್ ಅವರು ಧೋನಿ ವಿಕೆಟ್ ಹಿಂದುಗಡೆ ನಿಂತುಕೊಂಡು ಯಾವ ರೀತಿ ಸಲಹೆ – ಮಾರ್ಗದರ್ಶನಗಳನ್ನು ನೀಡುತ್ತಿದ್ದರು, ಹಾಗೂ ಧೋನಿ ಹೇಳಿದಂತೆ ಬೌಲಿಂಗ್ ಮಾಡಿದಾಗ ಎದುರಾಳಿ ತಂಡದ ವಿಕೆಟ್ಗಳು ಹೇಗೆ ಪತನಗೊಂಡಿದ್ದವು ಎಂಬುದರ ಬಗ್ಗೆ ಎರಡು ಮೂರು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಮಹಿ ಭಾಯ್ ಶ್ರೇಷ್ಠ ಹಾಗೂ ಅಪ್ರತಿಮ ಕ್ರಿಕೆಟಿಗ. ಅವರು ನನಗೆ ಮತ್ತು ಕುಲದೀಪ್ ಯಾದವ್ಗೆ ತುಂಬಾ ಪಂದ್ಯಗಳಲ್ಲಿ ಸಹಾಯ ಮಾಡಿದ್ದಾರೆ. ಕೆಲವೊಂದು ಬಾರಿ ನನ್ನ ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿದಾಗ ಧೋನಿ ನನ್ನ ಬಳಿ ಬಂದು ನನ್ನ ಭುಜದ ಮೇಲೆ ಕೈಯನ್ನಿಟ್ಟುಕೊಂಡು ಆತನಿಗೆ ಗೂಗ್ಲಿ ಎಸೆತ ಹಾಕು, ಆತನಿಗೆ ಸರಿಯಾಗಿ ಆಡಲು ಆಗಲ್ಲ ಎಂದು ಸಲಹೆ ನೀಡುತ್ತಿದ್ದರು. ಆಗ ಅವರು ನೀಡುತ್ತಿದ್ದ ಸಲಹೆಗಳು ತುಂಬಾ ಬಾರಿ ನೆರವಿಗೆ ಬರುತ್ತಿತ್ತು ಎಂದು ಚಾಹಲ್ ಹೇಳಿದ್ದಾರೆ.
ಇದೇ ರೀತಿ ಅನೇಕ ಬಾರಿ ನಡೆದಿದೆ. ದಕ್ಷಿಣ ಆಫ್ರಿಕಾದಲ್ಲಿ ನಾನು ಐದು ವಿಕೆಟ್ ಪಡೆದಿದ್ದೆ. ಆ ಪಂದ್ಯದಲ್ಲಿ ಜೆ.ಪಿ. ಡುಮಿನಿ ಬ್ಯಾಟಿಂಗ್ ಮಾಡುತ್ತಿದ್ದರು. ನನಗೆ ಅವರನ್ನು ಔಟ್ ಮಾಡಬೇಕಾಗಿತ್ತು. ಆಗ ಮಹೀ ಭಾಯ್ ನನ್ನ ಬಳಿ ಬಂದು ಆತನ ಸ್ಟಂಪ್ ಟು ಸ್ಟಂಪ್ ಬೌಲ್ ಮಾಡು ಎಂದು ಹೇಳಿದ್ದರು. ನಂತರ ವಿಕೆಟ್ ಹಿಂದುಗಡೆ ನಿಂತು ಅದೇ ರೀತಿ ಹೇಳಿದ್ದರು. ನಾನು ಧೋನಿಯ ಮಾರ್ಗದರ್ಶನವನ್ನು ಅನುಸರಿಸಿದೆ. ಡುಮಿನಿ ನನ್ನ ಎಸೆತವನ್ನು ಸ್ವೀಪ್ ಮಾಡಲು ಯತ್ನಿಸಿದಾಗ ಎಲ್ಬಿ ಬಲೆಗೆ ಬಿದ್ದಿದ್ದರು ಎಂಬುದನ್ನು ಚಾಹಲ್ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡ್ರು.
ಇನ್ನು ನ್ಯೂಜಿಲೆಂಡ್ ವಿರುದ್ಧದ ಪಂದ್ಯ. ಲಥಾಮ್ ಅವರು ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಪದೇ ಪದೇ ಸ್ವೀಪ್ ಶಾಟ್ಸ್ಗಳನ್ನು ಹೊಡೆಯುತ್ತಿದ್ದರು. ನಾನು ಗೂಗ್ಲಿ ಮತ್ತು ಲೆಗ್ ಸ್ಪಿನ್ ಮಾಡಲು ಯತ್ನಿಸುತ್ತಿದ್ದೆ. ಆದ್ರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅಲ್ಲದೆ ನನ್ನ ಎಸೆತಗಳನ್ನು ಬೌಂಡರಿಗಟ್ಟುತ್ತಿದ್ದರು. ಆಗ ನಾನು ತುಂಬಾನೇ ನಿರಾಸೆಯಾಗಿದ್ದೆ. ಆಗ ಮಹೀ ಭಾಯ್ ನನ್ನ ಬಳಿ ಬಂದು ಬೌಲಿಂಗ್ ಲಯವನ್ನು ಕಳೆದುಕೊಳ್ಳಬೇಡ ಎಂದು ಹೇಳಿದ್ರು. ಹಾಗೇ ಲಥಾಮ್ ಅವರು ಮುಂದಿನ ಎಸೆತದಲ್ಲಿ ಔಟಾಗಿದ್ರು. ನಾನು ಮಹೀ ಭಾಯ್ ಅವರನ್ನು ಅಪ್ಪಿಕೊಂಡಿದ್ದೆ. ಇವೆಲ್ಲಾ ಒಂದೆರಡು ನಿದರ್ಶನಗಳು. ಇದೇ ರೀತಿ ಅನೇಕ ಬಾರಿ ನಡೆದಿದೆ ಎಂದು ಚಾಹಲ್ ಧೋನಿಯವರನ್ನು ಗುಣಗಾನ ಮಾಡಿದ್ರು.








