ಒಬ್ಬ ವಿಕೆಟ್ ಕೀಪರ್ ಇನ್ನೊಬ್ಬ ವಿಕೆಟ್ ಕೀಪರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ಅಪರೂಪವೇ ಸರಿ. ಅದು ಕೂಡ ಟೀಮ್ ಇಂಡಿಯಾದಲ್ಲಿ ಮೊದಲು ಸ್ಥಾನ ಪಡೆದು ಆ ನಂತರ ಇನ್ನೊಬ್ಬ ವಿಕೆಟ್ ಕೀಪರ್ ನಾಯಕತ್ವದಲ್ಲಿ ಆಡುವುದು ಅಂದ್ರೆ ಸ್ವಲ್ಪ ಮತ್ಸತವಿದ್ದೇ ಇರುತ್ತದೆ. ಆದ್ರೆ ಪಾರ್ಥಿವ್ ಪಟೇಲ್ ಹಾಗಲ್ಲ. ತನ್ನ ಸ್ಥಾನವನ್ನು ಕಸಿದುಕೊಂಡ್ರೂ ಕೊನೆಗೆ ಅದೇ ಆಟಗಾರನ ಯಶಸ್ಸು, ಸಾಧನೆಯ ಬಗ್ಗೆ ಗುಣಗಾನ ಮಾಡಿರುವುದು ಪಾರ್ಥಿವ್ ಪಟೇಲ್ ಅವರ ದೊಡ್ಡ ಗುಣ. ಅಷ್ಟಕ್ಕೂ ಪಾರ್ಥಿವ್ ಪಟೇಲ್ ಗುಣಗಾನ ಮಾಡಿದ್ದು ಬೇರೆ ಯಾರನ್ನು ಅಲ್ಲ ರಾಂಚಿ ಹೀರೋ ಮಹೇಂದ್ರ ಸಿಂಗ್ ಧೋನಿಯವರನ್ನು.
ಹಾಗೇ ನೋಡಿದ್ರೆ ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ಮುಂಚೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು ಪಾರ್ಥಿವ್ ಪಟೇಲ್. ಆರಂಭದಲ್ಲಿ ಪಾರ್ಥಿವ್ ಪಟೇಲ್ ಭರವಸೆ ಮೂಡಿಸಿದ್ರೂ ನಂತರ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿಯೇ 2003ರ ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಬೇಕಾಯ್ತು.
2004ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಯಾದ ಮಹೇಂದ್ರ ಸಿಂಗ್ ಧೋನಿ ಸುಮಾರು 10-15 ವರ್ಷಗಳ ಕಾಲ ಟೀಮ್ ಇಂಡಿಯಾ ಯಶಸ್ವಿ ವಿಕೆಟ್ ಕೀಪರ್, ಅಪ್ರತಿಮ ನಾಯಕನಾಗಿ ಹೊರಹೊಮ್ಮಿದ್ರು. ಆದ್ರಿಂದಲೇ ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್ ಯಾರಿಗೂ ಕೂಡ ವಿಕೆಟ್ ಕೀಪರ್ ಸ್ಥಾನ ಸಿಗಲಿಲ್ಲ. ಅಷ್ಟರ ಮಟ್ಟಿಗೆ ಧೋನಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು.
ಇದೀಗ ಧೋನಿಯ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪಂದ್ಯಕ್ಕೆ ಮುನ್ನ ತನ್ನ ತಂಡ ಅದ್ರಲ್ಲೂ ಹನ್ನೊಂದರ ಬಳಗ ಯಾವ ರೀತಿ ಇರಬೇಕು ಎಂಬುದನ್ನು ಮೊದಲೇ ರೆಡಿ ಮಾಡಿಕೊಳ್ಳುತ್ತಿದ್ದರು. ಹಾಗೇ ಯಾರು ಯಾರು ಏನೇನು ಜವಾಬ್ದಾರಿಯನ್ನು ನಿಭಾಯಿಸಬೇಕು, ಎದುರಾಳಿ ತಂಡದ ವೀಕ್‍ನೆಸ್‍ಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಿದ್ದರು. ಪಂದ್ಯಗಳಿಗೆ ಧೋನಿ ಯಾವ ರೀತಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.
ಅಚ್ಚರಿ ಅಂದ್ರೆ ಧೋನಿಯ ನಾಯಕತ್ವದಲ್ಲಿ ಯಾವುದೇ ಬದಲಾವಣೆಯನ್ನು ಪಾರ್ಥಿವ್ ಪಟೇಲ್ ಕಂಡಿಲ್ಲವಂತೆ. ಅಷ್ಟೇ ಅಲ್ಲ, ಕೇವಲ ಎರಡೇ ನಿಮಿಷದಲ್ಲಿ ಧೋನಿ ಟೀಮ್ ಮೀಟಿಂಗ್ ಅನ್ನು ಮುಗಿಸುತ್ತಿದ್ದರು. ಅಷ್ಟೊಂದು ಕ್ಲಾರಿಟಿ ಧೋನಿಯವರಲ್ಲಿತ್ತು. ಯಾಕಂದ್ರೆ ನಾನು 2008ರಲ್ಲಿ ಧೋನಿ ಯಾವ ರೀತಿ ಟೀಮ್ ಮೀಟಿಂಗ್ ಮಾಡಿದ್ದರೋ ಅದೇ ರೀತಿ 2019ರಲ್ಲೂ ನೋಡಿದ್ದೇನೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
2008ರ ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾರ್ಥಿವ್ ಪಟೇಲ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಪಾರ್ಥಿವ್ 13 ಪಂದ್ಯಗಳಲ್ಲಿ 302 ರನ್ ದಾಖಲಿಸಿದ್ದರು. ಫೈನಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋಲು ಅನುಭವಿಸಿತ್ತು. ಆದ್ರೂ ಧೋನಿ ತಂಡವನ್ನು ಮುನ್ನಡೆಸಿದ್ದ ರೀತಿಗೆ ಪಾರ್ಥಿವ್ ಪಟೇಲ್ ಫಿದಾ ಆಗಿದ್ರು.
2010ರವರೆಗೆ ಪಾರ್ಥಿವ್ ಪಟೇಲ್ ಸಿಎಸ್‍ಕೆ ಪರ ಆಡಿದ್ದರು. ನಂತರ ಕೊಚ್ಚಿ ಟಸ್ಕರ್ ಕೇರಳ, ಡೆಕ್ಕನ್ ಚಾರ್ಜರ್ಸ್, ಸನ್ ರೈಸ್ ಹೈದ್ರಬಾದ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ 2018ರಲ್ಲಿ ಮತ್ತೆ ಸಿಎಸ್‍ಕೆ ತಂಡವನ್ನು ಸೇರಿಕೊಂಡಿದ್ದರು. 2008ರ ಐಪಿಎಲ್‍ನಲ್ಲಿ ನಾನು ಹಲವು ಶ್ರೇಷ್ಠ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ಮೈಕ್ ಹಸ್ಸಿ, ಫ್ಲೇಮಿಂಗ್, ಹೇಡನ್ ಅವರು ಪಂದ್ಯಕ್ಕೆ ಮುನ್ನ ಯಾವ ರೀತಿ ತಯಾರಿ ನಡೆಸುತ್ತಿದ್ದರು ಎಂಬುದನ್ನು ಹತ್ತಿರದಿಂದ ಗಮನಿಸಿದ್ದೇನೆ. ಐಪಿಎಲ್ ನಿಂದ ಸಾಕಷ್ಟು ಅನುಭವವನ್ನು ಕೊಟ್ಟಿದೆ ಅಂತ ಹೇಳಿದ್ದಾರೆ.








