ವಿಶ್ವ ಕ್ರಿಕೆಟ್‍ನ ಗ್ರೇಟ್ ಮ್ಯಾಚ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿ..!
ಮಹೇಂದ್ರ ಸಿಂಗ್ ಧೋನಿ… ವಿಶ್ವ ಕ್ರಿಕೆಟ್ ಸದಾ ನೆನಪಿನಲ್ಲಿಟ್ಟುಕೊಳ್ಳುವಂತಹ ಕ್ರಿಕೆಟಿಗ. ಒಬ್ಬ ಆಟಗಾರನಾಗಿ, ನಾಯಕನಾಗಿ, ಕ್ರಿಕೆಟಿಗನಾಗಿ ಧೋನಿಯ ಮೇಲೆ ಒಂಚೂರು ಕಪ್ಪು ಚುಕ್ಕೆ ಇಲ್ಲ. ತಾಳ್ಮೆ ಹಾಗೂ ಸಮಯ ಪ್ರಜ್ಜೆ ಎಂಬುದು ಧೋನಿಗೆ ದೇವರು ಕೊಟ್ಟ ವರ ಅಂತನೇ ಹೇಳಬಹುದು. ಮತ್ತೊಂದೆಡೆ ಆತ್ಮವಿಶ್ವಾಸ ಮತ್ತು ಟೈಮಿಂಗ್ ಜೊತೆ ಆಟವಾಡುವ ಧೋನಿ ಅತ್ಯುತ್ತಮ ಮ್ಯಾಚ್ ಫಿನಿಷರ್.
ಹೌದು, ಧೋನಿ ಎದುರಾಳಿ ತಂಡಗಳ ಪಾಲಿಗೆ ಗ್ಯಾಂಬ್ಲರ್. ತಾನು ಆಟವಾಡುತ್ತ ಎದುರಾಳಿ ಆಟಗಾರರನ್ನು ಆಟವಾಡಿಸುವ ಧೋನಿ ಕ್ರೀಸ್‍ನಲ್ಲಿರುವಷ್ಟು ಕಾಲ ಎದುರಾಳಿ ತಂಡಗಳಿಗೆ ಸಂಕಷ್ಠ ತಪ್ಪಿದ್ದಲ್ಲ. 22 ಯಾರ್ಡ್ ನ ಪಿಚ್ ನಲ್ಲಿ ಚಿರತೆಯಂತೆ ಓಡಾಡುವ ಧೋನಿಯ ಬ್ಯಾಟಿಂಗ್ ವೈಖರಿಯನ್ನು ಅರ್ಥಮಾಡಿಕೊಳ್ಳುವುದು ತುಸು ಕಷ್ಟವೇ ಸರಿ.
ಸವಾಲು ಎಷ್ಟೇ ದೊಡ್ಡದೇ ಇರಲಿ, ಅಲ್ಲಿ ಧೋನಿಯ ತಾಳ್ಮೆಯ ಆಟವೂ ಇರುತ್ತೆ.. ಹಾಗೇ ಅಬ್ಬರದ ಬ್ಯಾಟಿಂಗ್ ನೋಡಗರನ್ನು ಮಂತ್ರಮುಗ್ದಗೊಳಿಸುತ್ತದೆ. ಹಾಗಂತ ಧೋನಿ ಕಲಾತ್ಮಕ ಆಟಗಾರನಲ್ಲ. ಕ್ರಿಕೆಟ್‍ನ ಎಲ್ಲಾ ತಾಂತ್ರಿಕತೆಗಳನ್ನು ಕಲಿತುಕೊಂಡು ಆಡುವ ಆಟಗಾರನೂ ಅಲ್ಲ. ಆದ್ರೂ ಧೋನಿಯ ಬ್ಯಾಟಿಂಗ್ ನಲ್ಲಿ ಯಾರೂ ಊಹಿಸಲಾಗದಂತಹ ಮಾಂತ್ರಿಕತೆ ಇದೆ.
ಧೋನಿ ಕ್ರೀಸ್ ನಲ್ಲಿ ಕೊನೆಯ ಓವರ್ ತನಕ ಆಡ್ತಾ ಇದ್ರೆ ಅದೊಂದು ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದಂತೆ ಭಾಸವಾಗುತ್ತದೆ. ಯಾಕಂದ್ರೆ ಅಲ್ಲಿ ಅಷ್ಟೊಂದು ರೋಚಕತೆ ಇರುತ್ತೆ. ಒಂದೇ ಓವರ್ ನಲ್ಲಿ 20ಕ್ಕಿಂತ ಹೆಚ್ಚು ರನ್ ಗಳಿಸುವ ಸವಾಲೇ ಇರಲಿ, ಅದಕ್ಕಿಂತ ಕಮ್ಮಿ ಮೊತ್ತದ ಸವಾಲೇ ಆಗಿರಲಿ.. ಧೋನಿ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಬ್ಯಾಟಿಂಗ್ ಮಾಡುತ್ತಾರೆ. ತೀಕ್ಷ್ಣ ನೋಟ, ಯಾವುದೇ ಒತ್ತಡಗಳು ಇಲ್ಲದೆ ನಿರರ್ಗಳವಾಗಿ ಬ್ಯಾಟ್ ಬೀಸುತ್ತಾರೆ. ಹೀಗಾಗಿ ಧೋನಿ ಅನೇಕ ಬಾರಿ ಗ್ಯಾಂಬ್ಲಿಂಗ್ ಮಾಡಿಕೊಂಡು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಇನ್ನು ಧೋನಿಯ ಮ್ಯಾಚ್ ವಿನ್ನಿಂಗ್ ಸ್ಟೈಲ್ಲೇ ಒಂಥರಾ ಡಿಫರೆಂಟ್. ಪಂದ್ಯವನ್ನು ಸಿಕ್ಸರ್ ಸಿಡಿಸುವ ಮೂಲಕ ಗೆಲ್ಲಿಸಿಕೊಡುವಂತಹ ತಾಕತ್ತು ಧೋನಿಗಿದೆ. ಹೀಗಾಗಿ ಧೋನಿ ಕ್ರಿಕೆಟ್ ಅಭಿಮಾನಿಗಳಿಗೆ ಎವರ್ ಗ್ರೀನ್ ಹೀರೋ ಆಗಿದ್ದಾರೆ. ಅದ್ರಲ್ಲೂ 2011ರ ವಿಶ್ವಕಪ್‍ನ ಗೆಲುವಿನ ರನ್ ದಾಖಲಿಸಿದ್ದ ದೃಶ್ಯವಂತೂ ಧೋನಿಯವರನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದೆ. ಹೀಗೆ ಸುಮಾರು 20ಕ್ಕೂ ಹೆಚ್ಚು ಪಂದ್ಯಗಳಲ್ಲಿ ಧೋನಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ.
ಏಕದಿನ ಕ್ರಿಕೆಟ್ ನಲ್ಲಿ 9 ಬಾರಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ರೆ, ಟೆಸ್ಟ್ ಕ್ರಿಕೆಟ್ ನಲ್ಲೂ ಒಂದು ಬಾರಿ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ಒದಗಿಸಿದ್ದಾರೆ. ಹಾಗೇ ಐಪಿಎಲ್ ನಲ್ಲಿ ಐದು ಬಾರಿ, ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಮೂರು ಬಾರಿ ಹಾಗೂ ಚಾಂಪಿಯನ್ಸ್ ಲೀಗ್ ನಲ್ಲಿ ಎರಡು ಬಾರಿ ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ದಾಖಲಿಸಿಕೊಟ್ಟಿದ್ದಾರೆ.








