ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕೂಲ್ ಕ್ಯಾಪ್ಟನ್ ಅನ್ನೋ ಹೆಸರಿದೆ. ಹಾಗೇ ಚಾಣಕ್ಯ, ಗ್ಯಾಂಬ್ಲರ್, ವಿಕೆಟ್ ಹಿಂದುಗಡೆಯಿಂದಲೇ ಎದುರಾಳಿ ಬ್ಯಾಟ್ಸ್ ಮೆನ್ಗಳನ್ನು ತಬ್ಬಿಬ್ಬುಗೊಳಿಸುವ ಚಾಕಚಕ್ಯತೆಯೂ ಇದೆ. ಇದನ್ನೆಲ್ಲಾ ನಾವು ನೋಡಿದ್ದೇವೆ. ಹಾಗೇ ನೋಡಿದ್ರೆ, ಧೋನಿ ಒಬ್ಬ ಬ್ಯಾಟ್ಸ್ ಮೆನ್, ವಿಕೆಟ್ ಕೀಪರ್ ಗಿಂತಲೂ ನಾಯಕತ್ವದ ಗುಣಗಳಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಇದೀಗ ಧೋನಿ ಐಪಿಎಲ್ ನಲ್ಲಿ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದಾರೆ. ಇನ್ನುಳಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನ ನಾಯಕತ್ವದ ಜವಾಬ್ದಾರಿಗಳನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡ ನಾಯಕನಾಗಿ ಯಶ ಸಾಧಿಸುತ್ತಿದ್ದಾರೆ. ಆದ್ರೆ ಕೊಹ್ಲಿಯ ನಾಯಕತ್ವಕ್ಕೂ ಧೋನಿಯ ನಾಯಕತ್ವಕ್ಕೂ ತುಂಬಾನೇ ವ್ಯತ್ಯಾಸವಿದೆ. ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯಿಂದ ಕೆಲವೊಂದು ಬಾರಿ ತಾನು ನಾಯಕ ಎಂಬುದನ್ನೇ ಮರೆತುಬಿಡುತ್ತಾರೆ. ಆದ್ರೆ ಧೋನಿ ಹಾಗಲ್ಲ. ಕೂಲ್ ಆಗಿಯೇ ತಂಡವನ್ನು ಮುನ್ನಡೆಸುತ್ತಾ ಬಹುತೇಕ ಕ್ರಿಕೆಟ್ ಪಂಡಿತರ ಮತ್ತು ಅಭಿಮಾನಿಗಳ ಮನ ಕೂಡ ಗೆದ್ದಿದ್ದಾರೆ.
ಇದೀಗ ಸುರೇಶ್ ರೈನಾ ಧೋನಿಯ ನಾಯಕತ್ವದ ಬಗ್ಗೆ ತನ್ನ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಧೋನಿ ಮೈದಾನದಲ್ಲಿ ಮಾಡುತ್ತಿದ್ದ ಕೆಲವೊಂದು ತಂತ್ರಗಳು, ಆಟಗಾರರ ಮೇಲೆ ಇಟ್ಟಿದ್ದ ನಂಬಿಕೆಗಳು, ಹೀಗೆ ಧೋನಿಯ ಸಾಮಥ್ರ್ಯದ ಬಗ್ಗೆ ಕೆಲವೊಂದು ಘಟನೆಗಳ ಮೂಲಕ ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಧೋನಿಯ ನಾಯಕತ್ವದ ಗುಣಗಳನ್ನು ರೋಹಿತ್ ಶರ್ಮಾನಲ್ಲಿ ಕಾಣಬಹುದು ಎಂದು ಹೇಳಿದ್ದಾರೆ.
ಧೋನಿಯ ನಾಯಕತ್ವಕ್ಕೂ ರೋಹಿತ್ ಶರ್ಮಾ ನಾಯಕತ್ವಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ವಿರಾಟ್ ಕೊಹ್ಲಿಯ ನಾಯಕತ್ವ ಭಿನ್ನವಾಗಿರುತ್ತದೆ. ಆದ್ರೆ ಧೋನಿಯ ನಾಯಕತ್ವವನ್ನು ನಾವು ರೋಹಿತ್ ನಲ್ಲಿ ಕಾಣಬಹುದು ಎಂದಿದ್ದಾರೆ. ಧೋನಿ ಮತ್ತು ರೋಹಿತ್ ನಾಯಕತ್ವ ಬಹುತೇಕ ಒಂದೇ ರೀತಿಯಲ್ಲಿದೆ. ರೋಹಿತ್ ಕೂಡ ಕೂಲ್ ಆಗಿಯೇ ಇರುತ್ತಾರೆ. ಆಟಗಾರರಿಗೆ ಪ್ರೇರಣೆಯನ್ನು ನೀಡುತ್ತಾರೆ. ರೋಹಿತ್ ಬಿಂದಾಸ್ ಆಗಿಯೇ ಇರುತ್ತಾರೆ. ರೋಹಿತ್ ಬ್ಯಾಟ್ನಿಂದ ರನ್ ಹರಿದು ಬಂದಾಗ ಇತರೆ ಆಟಗಾರರು ಅದೇ ರೀತಿ ಆಡಬೇಕು ಅನ್ನೋ ಮನಸ್ಥಿತಿಗೆ ಬರುತ್ತಾರೆ. ಅದನ್ನು ರೋಹಿತ್ ಮಾಡುತ್ತಿದ್ದಾರೆ.
ಈ ಕಾರಣಕ್ಕೆ ನನಗೆ ರೋಹಿತ್ ಇಷ್ಟವಾಗುತ್ತಾರೆ ಅಂತಾರೆ ಸುರೇಶ್ ರೈನಾ ನಾನು ಇತ್ತೀಚಿಗೆ ಮುಂಬೈ ಮತ್ತು ಪುಣೆ ತಂಡಗಳ ನಡುವಿನ ಫೈನಲ್ ಪಂದ್ಯವೊಂದನ್ನು ನೋಡಿದ್ದೆ. ಅದ್ರಲ್ಲಿ ರೋಹಿತ್ ಅವರ ನಾಯಕತ್ವದ ಕೆಲವೊಂದು ನಿರ್ಧಾರಗಳು ನನ್ನ ಗಮನ ಸೆಳೆದವು. ಯಾವ ರೀತಿ ಎದುರಾಳಿ ತಂಡಕ್ಕೆ ಒತ್ತಡ ಹೇರಬೇಕು ಎಂಬುದರ ಹಿಂದಿನ ನಿರ್ಧಾರಗಳು ಎಲ್ಲವೂ ರೋಹಿತ್ ಅವರದ್ದೆ ಆಗಿತ್ತು. ಕೆಲವೊಂದು ಬಾರಿ ಕೋಚ್ ನ ಸಲಹೆ, ಮಾರ್ಗದರ್ಶನಗಳು ಬರುತ್ತವೆ. ಆದ್ರೆ ರೋಹಿತ್ಗೆ ಗೊತ್ತಿತ್ತು. ಯಾವಾಗ ಏನು ನಿರ್ಧಾರ ತಗೋಬೇಕು ಎಂಬುದು. ರೋಹಿತ್ ನಾಯಕತ್ವದಲ್ಲಿ ಹಲವು ಟ್ರೋಪಿಗಳು ಬಂದಿವೆ ಎಂದು ಸುರೇಶ್ ರೈನಾ ರೋಹಿತ್ ಶರ್ಮಾ ಅವರ ನಾಯಕತ್ವದ ಗುಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.








