ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಕಿಚ್ಚು ಮತ್ತೆ ಹೊಗೆಯಾಡಲು ಶುರುವಾಗಿದೆ. ಲೋಕಸಭಾ ಚುನಾವಣೆ ಬಳಿಕ ಕೊಂಚ ತಣ್ಣಗಾಗಿದ್ದ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಚರ್ಚೆ ಇದೀಗ ಏಕಾಏಕಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಾಲುಗಳು. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಹೋದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಭೇಟಿ ಬಳಿಕ ಬದಲಾಯ್ತಾ ಚಿತ್ರಣ
ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಒಟ್ಟಿಗೆ ಭೇಟಿಯಾಗಿದ್ದರು. ಅಧಿಕಾರ ಹಂಚಿಕೆ ಗೊಂದಲದ ಬಳಿಕ ಇಬ್ಬರು ನಾಯಕರನ್ನು ರಾಹುಲ್ ಒಟ್ಟಿಗೆ ಭೇಟಿಯಾಗಿದ್ದು ಇದೇ ಮೊದಲು. ಈ ಸಂದರ್ಭದಲ್ಲಿ ನಡೆದ ಐದು ನಿಮಿಷಗಳ ರಹಸ್ಯ ಮಾತುಕತೆ ಮತ್ತು ಡಿಕೆಶಿಯವರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ ರೀತಿ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಾಹುಲ್ ಗಾಂಧಿ ಭೇಟಿಯ ನಂತರವಷ್ಟೇ ಡಿಕೆ ಸಹೋದರರ ಬಾಡಿ ಲ್ಯಾಂಗ್ವೇಜ್ ಬದಲಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಚರ್ಚೆಯಾಗಿರುವ ಸುಳಿವು ನೀಡಿದೆ.
ಡಿಕೆ ಸುರೇಶ್ ನೀಡಿದ ಯಶಸ್ಸಿನ ಸುಳಿವು
ತಮ್ಮ ಸಹೋದರ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂಬುದು ಡಿ.ಕೆ. ಸುರೇಶ್ ಅವರ ಬಹುದಿನಗಳ ಕನಸು. ಇದೀಗ ಡಿಕೆಶಿ ಪೋಸ್ಟ್ ಬೆನ್ನಲ್ಲೇ ಸುರೇಶ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅರ್ಥಗರ್ಭಿತ ಸಾಲುಗಳನ್ನು ಬರೆದುಕೊಂಡಿದ್ದಾರೆ. ಯಶಸ್ಸಿನ ಮೊದಲ ಹೆಜ್ಜೆಯೇ ಪ್ರಯತ್ನ, ಸತತ ಪ್ರಯತ್ನದ ಫಲವೇ ಯಶಸ್ಸು ಎಂಬ ಸುರೇಶ್ ಅವರ ಮಾತುಗಳು ಬರೀ ತತ್ವದ ಮಾತಾಗಿರದೆ, ರಾಜಕೀಯವಾಗಿ ಗುರಿ ತಲುಪುವ ವಿಶ್ವಾಸದಂತಿದೆ. ಅಣ್ಣನ ಪ್ರಯತ್ನಕ್ಕೆ ತಮ್ಮನ ಬೆಂಬಲ ಸದಾ ಇದೆ ಎಂಬುದನ್ನು ಸಾರುವ ಜೊತೆಗೆ, ಸಿಎಂ ಕುರ್ಚಿಯ ಹೋರಾಟದಲ್ಲಿ ನಾವು ಗೆದ್ದೇ ತೀರುತ್ತೇವೆ ಎಂಬ ಸಂದೇಶವನ್ನು ಅವರು ರವಾನಿಸಿದಂತಿದೆ.
ಪ್ರಯತ್ನ ಮತ್ತು ಪ್ರಾರ್ಥನೆಯ ನಡುವಿನ ಗೊಂದಲ
ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹಂಚಿಕೊಂಡ ಪೋಸ್ಟ್ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿತ್ತು. ಪ್ರಯತ್ನ ವಿಫಲ ಆದ್ರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂಬ ಒಕ್ಕಣೆಯೊಂದಿಗೆ ಅವರು ದೇವರ ಮೊರೆ ಹೋಗಿರುವ ಫೋಟೋ ಹಂಚಿಕೊಂಡಿದ್ದರು. ಇದರ ರಾಜಕೀಯ ಅರ್ಥವೇನೆಂಬುದೇ ಈಗಿನ ಚರ್ಚೆಯ ವಿಷಯ. ಇಲ್ಲಿಯವರೆಗೆ ತಾವು ಪಟ್ಟ ಶ್ರಮ ಮತ್ತು ಹೈಕಮಾಂಡ್ ಬಳಿ ಮಾಡಿದ ಪ್ರಯತ್ನಗಳು ಒಂದು ಹಂತಕ್ಕೆ ಬಂದಿದ್ದು, ಇನ್ನುಳಿದದ್ದು ದೈವೇಚ್ಛೆ ಅಥವಾ ಹೈಕಮಾಂಡ್ ಕೃಪೆ ಎಂಬರ್ಥದಲ್ಲಿ ಡಿಕೆಶಿ ಈ ಪೋಸ್ಟ್ ಹಾಕಿರಬಹುದೇ ಎಂಬ ಪ್ರಶ್ನೆ ಮೂಡಿದೆ. ಸಿಎಂ ಕುರ್ಚಿಗಾಗಿ ದೆಹಲಿ ನಾಯಕರ ಮನವೊಲಿಸುವ ಪ್ರಯತ್ನದ ಜೊತೆಗೆ ದೇವರ ಮೊರೆ ಹೋಗಿರುವುದು ತೋರಿಸುತ್ತಿದೆ.
ದೆಹಲಿ ಅಂಗಳಕ್ಕೆ ಶಿಫ್ಟ್ ಆಗಲಿದೆಯೇ ರಾಜಕೀಯದಾಟ
ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಚೆಂಡು ದೆಹಲಿ ಅಂಗಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ರಾಹುಲ್ ಗಾಂಧಿ ಅವರು ಡಿಕೆಶಿಯವರನ್ನು ಪ್ರತ್ಯೇಕವಾಗಿ ಮಾತನಾಡಿಸಿರುವುದು ಮತ್ತು ಶೀಘ್ರವೇ ದೆಹಲಿಗೆ ಬರುವಂತೆ ಸೂಚನೆ ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ರಾಹುಲ್ ಗಾಂಧಿ ಬಳಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿರಬಹುದು ಎನ್ನಲಾಗಿದ್ದು, ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಒಟ್ಟಾರೆಯಾಗಿ, ಡಿಕೆ ಬ್ರದರ್ಸ್ ಅವರ ಈ ಮಾರ್ಮಿಕ ಪೋಸ್ಟ್ಗಳು ಕಾಂಗ್ರೆಸ್ ಪಾಳಯದಲ್ಲಿ ನಿದ್ದೆಗೆಡಿಸಿರುವುದಂತೂ ಸತ್ಯ. ಇದು ಕೇವಲ ಸಾಂದರ್ಭಿಕ ಪೋಸ್ಟ್ಗಳೋ ಅಥವಾ ನಾಯಕತ್ವ ಬದಲಾವಣೆಯ ಮುನ್ಸೂಚನೆಯೋ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.








