ಕೊಲ್ಕತ್ತಾ : ದೆಹಲಿಯಲ್ಲಿ ನಡೆದ ತಬ್ಲಿಘಿ ಸಭೆಯಿಂದ ಕೊರೊನಾ ವೈರಸ್ ಸೋಂಕು ಮತ್ತಷ್ಟು ಹರಡಿದೆ. ದೇಶದ ಸುರಕ್ಷತೆಯನ್ನು ಮರೆತು ಧಾರ್ಮಿಕ ಸಭೆ ನಡೆಸಿದ ತಬ್ಲಿಘಿ ಜಮಾತ್ ಸಂಘಟನೆಯನ್ನು ನಿಷೇಧಿಸುವಂತೆ ಕೆಲವರು ಆಗ್ರಹಿಸುತ್ತಿದ್ದಾರೆ. ಇನ್ನು ರಾಜ್ಯ ಸರ್ಕಾರಗಳೂ ಸಹ ಈ ಸಭೆಯಲ್ಲಿ ಭಾಗವಹಿಸಿದರನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುತ್ತಿವೆ. ಆದ್ರೆ ಅತ್ತ ಪಶ್ಚಿಮ ಬಂಗಾಳದಿಂದ ಈ ಸಭೆಗೆ ಎಷ್ಟು ಜನ ತೆರಳಿದ್ದರೆಂದು ಮಾಹಿತಿ ನೀಡಲು ಸಿಎಂ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ಅಲ್ಲದೇ, ಇಂತಹ ಕೋಮು ಸೃಷ್ಟಿಸುವ ಪ್ರಶ್ನೆಗಳನ್ನು ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೊರೊನಾ ವೈರಸ್ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲು ದೀದಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ರಾಜ್ಯದಿಂದ ಎಷ್ಟು ಜನ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪತ್ರಕರ್ತರು ಪ್ರಶ್ನಿಸಿದರು. ಇದರಿಂದ ಕೆರಳಿದ ಮಮತಾ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೋಮು ಭಾವನೆ ಕೆರಳಿಸುವಂತ ಪ್ರಶ್ನೆಗಳನ್ನೇಕೆ ಕೇಳುತ್ತೀರಿ ಎಂದು ಹರಿಹಾಯ್ದರು. ಅದಾಗ್ಯೂ ಕೇಂದ್ರ ಸರ್ಕಾರದ ಮಾಹಿತಿಯಂತೆ ಸುಮಾರು 71 ತಬ್ಲಿಘಿಗಳು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದು, ಈ ಪೈಕಿ 54 ಜನರನ್ನು ಗುರುತಿಸಿ ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ ಎಂದು ಮಮತಾ ಉತ್ತರಿಸಿದರು.








