ಆಟ ಮುಗಿಸಿ ಹೊರಟು ಹೋದ ಡೀಗೋ ಮರಡೋನಾ…!
ಡೀಗೋ ಮರಡೋನಾ ಇನ್ನಿಲ್ಲ… ಆದ್ರೆ ಈ ಹೆಸರನ್ನು ಯಾವತ್ತೂ ಮರೆಯೋಕೆ ಆಗಲ್ಲ.. ಯಾಕಂದ್ರೆ ಅವರು ವಿಶ್ವ ಫುಟ್ ಬಾಲ್ ರಂಗದಲ್ಲಿ ಮಾಡಿರುವ ಸಾಧನೆಗಳು ಅಷ್ಟಿಷ್ಟಲ್ಲ… ಅಷ್ಟೇ ಯಾಕೆ ಮೈದಾನ ಮತ್ತು ಮೈದಾನದ ಹೊರಗಡೆ ಆಡಿರುವ ಆಟೋಟೊಪಗಳಿಗೂ ಲೆಕ್ಕವೂ ಸಿಗಲ್ಲ. ಅಪ್ರತಿಮ ಆಟಗಾರನಾದ್ರೂ ತುಂಬಾ ಒಳ್ಳೆಯವರಲ್ಲ. ಹಾಗಂತ ತುಂಬಾ ಕೆಟ್ಟವರೂ ಅಲ್ಲ… ಯಾರು ಏನೇ ಅಂದ್ರೂ ಕ್ಯಾರೇ ಮಾಡುತ್ತಿರಲ್ಲ. ಯಾರ ಮಾತನ್ನೂ ಕೇಳುವ ಮನಸ್ಥಿತಿಯು ಅವರಲ್ಲಿರಲಿಲ್ಲ. ಹೀಗೇ ಆಡಬೇಕು.. ಹೀಗೇ ಬದುಕಬೇಕು.. ಹೀಗೇ ಜೀವನ ಸಾಗಿಸಬೇಕು ಅಂತ ಅಂದುಕೊಂಡವರಲ್ಲ. ಬದಲಾಗಿ ನಾನು ಆಡೋದು ಹೀಗೇ.. ಜೀವನದಲ್ಲಿ ಇರೋದೇ ಹೀಗೇ.. ನಾನು ಬದುಕುವುದು ಹೀಗೇ ಅಂತ ತನ್ನ 60ನೇ ವಯಸ್ಸಿನಲ್ಲಿ ಆಟ ಮುಗಿಸಿ ಹೊರಟು ಹೋದ್ರೂ ಡೀಗೋ ಮರಡೋನಾ..!
ಅಂದ ಹಾಗೇ, ಡೀಗೋ ಮರಡೋನಾ ಒಂಥರಾ ವಿಚಿತ್ರ ವ್ಯಕ್ತಿ. ಆದ್ರೆ ಅತ್ಯದ್ಭುತ ಫುಟ್ ಬಾಲ್ ಆಟಗಾರ. ಹಾಗೇ, ಜಾಗತಿಕ ಫುಟ್ ಬಾಲ್ ರಂಗದಲ್ಲಿ ದಂತಕಥೆಯಾಗಿ ಬೆಳೆದಿರೋದಕ್ಕೆ ಕಾರಣ ಅವರಲ್ಲಿದ್ದ ಅಪ್ರತಿಮ ಪ್ರತಿಭೆ. ಫುಟ್ ಬಾಲ್ ಆಟದಲ್ಲಿ ಯಶಸ್ಸಿನ ಶಿಖರವೇರಿದ್ದರು. ಅದೇ ರೀತಿ ವಿವಾದಗಳಿಂದಲೂ ಕುಖ್ಯಾತಿಯನ್ನು ಗಳಿಸಿದ್ದರು. ಆದ್ರೂ ಡೀಗೋ ಮರಡೋನಾ ಅವರ ವರ್ಚಸ್ಸು ಮತ್ತು ಚಾರ್ಮ್ ಕಮ್ಮಿಯಾಗಲಿಲ್ಲ. ಡೀಗೋ ಮರಡೋನಾ ಅವರ ಆಟಕ್ಕೆ ಮನ ಸೋತಿರುವ ಕೋಟ್ಯಂತರ ಫುಟ್ ಬಾಲ್ ಅಭಿಮಾನಿಗಳು ದೇವರಂತೆ ಆರಾಧನೆ ಮಾಡುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಡೀಗೋ ಮರಡೋನಾ ಅವರು ಕಾಲ್ಚೆಂಡಿನ ಜೊತೆ ನಡೆಸುತ್ತಿದ್ದ ಸರಸ.. ವಿರಸ..!
ಅಷ್ಟಕ್ಕೂ ಡೀಗೋ ಮರಡೋನಾ ಅವರನ್ನು ಅರ್ಥ ಮಾಡಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ಬಹುಶಃ ಡೀಗೋ ಮರಡೋನಾ ಅವರನ್ನು ಬದುಕಿನಲ್ಲಿ ಅರ್ಥ ಮಾಡಿಕೊಂಡಿದ್ದು ಫುಟ್ ಬಾಲ್ ಚೆಂಡು ಮಾತ್ರ. ವೇಗ, ಏಕಾಗ್ರತೆ, ತಾಳ್ಮೆ, ಶಕ್ತಿ, ಯುಕ್ತಿಯಿಂದ ಎದುರಾಳಿ ಆಟಗಾರರನ್ನು ತಬ್ಬಿಬ್ಬುಗೊಳಿಸುತ್ತಿದ್ದ ಮರಡೋನಾ ಆಟವನ್ನು ನೋಡುವುದೇ ಚೆಂದ.
ಎದುರಾಳಿ ತಂಡದ ಚಕ್ರವ್ಯೂಹವನ್ನು ಕ್ಷಣ ಮಾತ್ರದಲ್ಲಿ ಭೇದಿಸುವಂತಹ ತಾಕತ್ತು ಮರಡೋನಾ ಅವರಿಗಿತ್ತು. 5.5 ಅಡಿ ಎತ್ತರದ ವಾಮನ ಮೂರ್ತಿ ಮರಡೋನಾ ಅವರಲ್ಲಿ ಚಿರತೆಯ ವೇಗವಿತ್ತು. ಕುದುರೆಯ ಲಯವಿತ್ತು. ಹಾವಿನಂತೆ ಓಡಾಡುತ್ತಾ ಚೆಂಡನ್ನು ಡ್ರಿಬಲ್ ಮಾಡುವ ಕಲೆಯೂ ಕರಗತವಾಗಿತ್ತು. ಎದುರಾಳಿ ತಂಡದ ತಂತ್ರಗಾರಿಕೆಯನ್ನು ಕ್ಷಣ ಮಾತ್ರದಲ್ಲಿ ವಂಚಿಸುವ ನರಿ ಬುದ್ಧಿಯೂ ಇತ್ತು. ಮಿಂಚಿನಂತೆ ಚೆಂಡನ್ನು ಗುರಿ ಮುಟ್ಟಿಸುವಂತಹ ಗಜ ಶಕ್ತಿಯೂ ಅವರ ಕಾಲಿನಲ್ಲಿತ್ತು. ಸಿಂಹದಂತೆ ರಾಜಗಾಂಭೀರ್ಯದ ಆಟದ ಜೊತೆಗೆ ಹುಲಿಯಂತೆ ಹೊಂಚು ಹಾಕಿ ಗೋಲು ಹೊಡೆಯುವ ಯುಕ್ತಿ ಮರಡೋನಾ ಅವರಲ್ಲಿತ್ತು. ಜಿಗರೆಯಂತೆ ಜಿಗಿದು ಚೆಂಡನ್ನು ಹೊಡೆಯುವ ಶೈಲಿಯೇ ಅತ್ಯದ್ಭುತ. ಮೈದಾನದಲ್ಲಿ ಚೆಂಡಿನ ಜೊತೆ ನಾಟ್ಯ ಮಯೂರಿಯಂತೆ ಸರಸ – ವಿರಸವಾಡುತ್ತಿರುವ ಮರಡೋನಾ ಅವರ ಆಟವನ್ನು ನೋಡುತ್ತಿದ್ದಾಗ ಅಭಿಮಾನಿಗಳ ಹರುಷ ಮುಗಿಲು ಮುಟ್ಟುತ್ತಿತ್ತು. ವೀಕ್ಷಕ ವಿವರಣೆಕಾರರು ಡೀಗೋ ಅವರ ಆಟವನ್ನು ವರ್ಣಿಸುವಾಗ ತಮ್ಮನ್ನು ತಾವೇ ಮರೆತುಬಿಡುತ್ತಿದ್ದರು. ಮರಡೋನಾ ಅವರ ಆಟದ ಸೊಬಗಿಗೆ ಎಷ್ಟು ಪದಪುಂಜಗಳನ್ನು ಸೇರಿಸಿದ್ರೂ ಸಾಕಾಗುವುದಿಲ್ಲ. ಅಷ್ಟರ ಮಟ್ಟಿಗೆ ಡೀಗೋ ಮರಡೋನಾ ಆಟವನ್ನು ಪರವಶ ಮಾಡಿಕೊಂಡಿದ್ದರು.
ಅಷ್ಟಕ್ಕೂ ಯಾರು ಈ ಡೀಗೋ ಮರಡೋನಾ ?
ಡೀಗೋ ಮರಡೋನಾ ಅರ್ಜೆಂಟಿನಾದ ಬ್ಯೂನಸ್ ಐರೀಸ್ ನವರು. ಸ್ಲಮ್ ನಲ್ಲಿ ಹುಟ್ಟಿ ಬೆಳೆದ ಡೀಗೋ ಮರಡೋನಾ ತನ್ನ ಎಂಟರ ಹರೆಯದಲ್ಲೇ ಫುಟ್ ಬಾಲ್ ಆಟವನ್ನು ಸಿದ್ಧಿಸಿಕೊಂಡಿದ್ದರು. ಸ್ಥಳೀಯ ಟೂರ್ನಿಗಳಲ್ಲಿ ತನ್ನ ಅಪ್ರತಿಮ ಆಟದ ಮೂಲಕ ಗಮನ ಸೆಳೆದ ಡೀಗೋ, 16ರ ಹರೆಯದಲ್ಲೇ ಅರ್ಜೆಂಟಿನಾ ರಾಷ್ಟ್ರೀಯ ತಂಡದ ಕದ ತಟ್ಟಿದ್ದರು. ಆದ್ರೆ ಬಾಲಕ ಅನ್ನೋ ಕಾರಣಕ್ಕೆ ಡೀಗೋ ಮರಡೋನಾ ಅವರು 1978ರ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡ್ರು. ಆದ್ರೆ 1982ರ ವಿಶ್ವಕಪ್ ನಲ್ಲಿ ಆಡಿದ್ದ ಡೀಗೋ 1986ರ ಮೆಕ್ಸಿಕೊ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡವನ್ನು ಮುನ್ನಡೆಸಿದ್ದರು. ನಾಯಕನಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಡೀಗೋ ಮರಡೋನಾ ಅವರು ಅರ್ಜೆಂಟಿನಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅದ್ರಲ್ಲೂ ಕ್ವಾರ್ಟರ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಿಸಿದ್ಧ ಎರಡು ಗೋಲುಗಳು ಶತಮಾನದ ಗೋಲುಗಳು ಎಂದೇ ಖ್ಯಾತಿ ಪಡೆದಿವೆ. ಅಷ್ಟೇ ಅಲ್ಲ, ಈ ಎರಡು ಗೋಲುಗಳಲ್ಲಿ ಒಂದು ಗೋಲು ಕುಖ್ಯಾತಿಗೆ ಪಾತ್ರವಾದ್ರೆ, ಇನ್ನೊಂದು ಗೋಲು ವಿಶ್ವ ಫುಟ್ ಬಾಲ್ ರಂಗವನ್ನು ಚಕಿತಗೊಳ್ಳುವಂತೆ ಮಾಡಿತ್ತು. ಮೊದಲ ಗೋಲು ಹ್ಯಾಂಡ್ ಗೋಲು ಎಂದೇ ಕಪ್ಪುಪಟ್ಟಿಗೆ ಸೇರಿದ್ರೆ, ಇನ್ನೊಂದು ಗೋಲು ದಾಖಲಿಸಿದ್ದ ಪರಿಗೆ ಎಂಥವರು ಕೂಡ ಬೆರಗಗೊಳ್ಳಬೇಕು. ಸುಮಾರು 50-60 ಮೀಟರ್ ದೂರದಿಂದ ಇಂಗ್ಲೆಂಡ್ನ ಐವರು ಆಟಗಾರರನ್ನು ವಂಚಿಸಿ ಚೆಂಡನ್ನು ಡ್ರಿಬಲ್ ಮಾಡುತ್ತಾ ಮರಡೋನಾ ಅವರು ಕೇವಲ 10 ಸೆಕೆಂಡುಗಳಲ್ಲಿ ಗೋಲು ದಾಖಲಿಸಿದ್ದರು. ಈ ಮೂಲಕ ಡೀಗೋ ಮರಡೋನಾ ಅವರು ವಿಶ್ವ ಫುಟ್ ಬಾಲ್ ರಂಗದ ಎವರ್ ಗ್ರೀನ್ ಹೀರೋ ಅದ್ರು. ದಂತಕಥೆಯಾಗಿ ಬೆಳೆದರು. ಅಭಿಮಾನಿಗಳ ಪಾಲಿಗೆ ಫುಟ್ ಬಾಲ್ ಆಟದ ದೇವರಾದ್ರು.
ನಾಲ್ಕು ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡವನ್ನು ಪ್ರತಿನಿಧಿಸಿರುವ ಡೀಗೋ ಮರಡೋನಾ ಅರ್ಜೆಂಟಿನಾ ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ಹಾಗೇ ಬಾರ್ಸಿಲೋನಾ, ನೆಪೋಲಿ ಕ್ಲಬ್ ಗಳ ಪರ ಆಡಿದ್ದರು. ಅಲ್ಲದೆ ತಂಡದ ಯಶಸ್ಸಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಡೀಗೋ ಮರಡೋನಾ ಬದುಕನ್ನು ತನ್ನ ಇಷ್ಟದಂತೆ ಸಾಗಿಸಿದ್ರು. ಬಡತನಲ್ಲಿ ಅರಳಿದ ಡೀಗೋ ಮರಡೋನಾ ಅವರಿಗೆ ಫುಟ್ ಬಾಲ್ ಪ್ರತಿಭೆ ಎಲ್ಲವನ್ನು ಮರೆ ಮಾಚುವಂತೆ ಮಾಡಿತ್ತು. ಹೆಸರು, ಯಶಸ್ಸಿಗೆ ತಕ್ಕಂತೆ ದುಡ್ಡಿನ ಹೊಳೆಯೇ ಹರಿದುಬಂತು. ಯಶಸ್ಸಿನ ಆಮಲಿನಲ್ಲಿ ದುಶ್ಚಟಗಳ ದಾಸನಾದ್ರು. ಸಿಗರೇಟ್, ಕೊಕೇನ್, ಮದಿರೆ, ಮಾನಿನಿಯರ ಸಹವಾಸದಿಂದ ತನ್ನ ವರ್ಣರಂಜಿತ ಬದುಕನ್ನು ಚಿತ್ರನ್ನವಾಗಿಸಿಕೊಂಡ್ರು. ದುಶ್ಚಟಗಳಿಂದ ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡ್ರು. ಹಾಗೇ ತನ್ನ ಮುಂಗೋಪ ಮತ್ತು ವಿಚಿತ್ರ ವರ್ತನೆ ಹಾಗೂ ಕೆಲವೊಂದು ವಿವಾದಗಳಿಂದ ವರ್ಣರಂಜಿತ ಬದುಕಿಗೆ ಕಪ್ಪುಚುಕ್ಕೆಗಳಾದವು. ಇನ್ನೊಂದೆಡೆ ವೈಯಕ್ತಿಕ ಬದುಕು ಕೂಡ ಅಷ್ಟೇ. ಡೀಗೋ ಮರಡೋನಾ ಅವರು ನಾಲ್ಕು ಮದುವೆಯಾಗಿದ್ದರು. ಹೀಗಾಗಿ ಡೀಗೋ ಮರಡೋನಾ ಅವರು ಬದುಕು ಕೂಡ ಫುಟ್ ಬಾಲ್ ಆಟದಂತೆ ಸ್ಥಿರವಾಗಿರಲಿಲ್ಲ.
ಒಟ್ಟಿನಲ್ಲಿ ಒಬ್ಬ ಮಹಾನ್ ಆಟಗಾರರನ್ನು ವಿಶ್ವಫುಟ್ ಬಾಲ್ ಕಳೆದುಕೊಂಡಿದೆ. ಗೋಲ್ಡನ್ ಕಿಡ್ ಎಂದೇ ಖ್ಯಾತಿ ಪಡೆದಿದ್ದ ಡೀಗೋ ಮರಡೋನಾ ಅವರು ಮೈದಾನದಲ್ಲಿ ಬಿಟ್ಟು ಹೋದ ನೆನಪುಗಳು ಎಂದೆಂದಿಗೂ ಶಾಶ್ವತವಾಗಿರುತ್ತವೆ.