ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸುಳಿವು ನೀಡಿದ್ದಾರೆ.
ಡೀಸೆಲ್ ದರದಲ್ಲಿ 40 ರೂಪಾಯಿ ವ್ಯತ್ಯಾಸ: ಆತಂಕ ವ್ಯಕ್ತಪಡಿಸಿದ ಡಿಕೆಶಿ
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಸಾರಿಗೆ ನಿಗಮಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿದರು. ಖಾಸಗಿ ಬಂಕ್ಗಳಿಗೂ ಮತ್ತು ಸಾರಿಗೆ ನಿಗಮಗಳ ಡಿಪೋಗಳಿಗೆ ಪೂರೈಕೆಯಾಗುವ ಡೀಸೆಲ್ ದರದ ನಡುವೆ ಬರೋಬ್ಬರಿ 40 ರೂಪಾಯಿಗಳ ವ್ಯತ್ಯಾಸವಿದೆ. ಇದನ್ನು ಕಂಡು ನನಗೂ ಆಶ್ಚರ್ಯವಾಯಿತು. ಈ ಹಿಂದೆ ಡೀಸೆಲ್ ಬೆಲೆ ಹೆಚ್ಚಾದಾಗ ಟಿಕೆಟ್ ದರವನ್ನು ಪರಿಷ್ಕರಿಸುವ ನಿಯಮವಿತ್ತು. ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ಸಂಸ್ಥೆಗಳು ಉಳಿಬೇಕು ಎಂದರೆ ದರ ಏರಿಕೆ ಅನಿವಾರ್ಯವೇ ಎಂಬ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದು ತಿಳಿಸಿದರು.
ಬಸ್ ದರ ಏರಿಕೆ ಮಾಡುವಾಗ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಸಂಸ್ಥೆಯ ಉಳಿವು ಮತ್ತು ಜನರ ಅನುಕೂಲ ಎರಡನ್ನೂ ಗಮನದಲ್ಲಿಟ್ಟುಕೊಂಡು ವರದಿ ಬಂದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ಒಂದೆಡೆ ದರ ಏರಿಕೆಯ ಮಾತು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ. ಒಟ್ಟು 4235 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಬಸ್ಸುಗಳ ಖರೀದಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಲ್ಲಿ ಕೆಎಸ್ಆರ್ಟಿಸಿಗೆ 400 ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 220 ಸೇರಿ ಒಟ್ಟು 620 ಹೊಸ ಬಸ್ಸುಗಳು ಸೇರ್ಪಡೆಯಾಗಲಿವೆ.
ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವ ನಿಟ್ಟಿನಲ್ಲಿ 112 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಸಂಡೂರು ತಾಲೂಕು ಕೇಂದ್ರದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೂ ಒಪ್ಪಿಗೆ ಸಿಕ್ಕಿದೆ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿ ಇಂಧನ ಉಳಿಸುವಂತೆ ಪ್ರಧಾನ ಮಂತ್ರಿಗಳೇ ಕರೆ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ನೆನಪಿಸಿದರು.
ಸಾರಿಗೆ ಇಲಾಖೆಯನ್ನು ಆಧುನೀಕರಣಗೊಳಿಸುವ ಭರವಸೆಯ ನಡುವೆಯೇ, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತಿವೆ.







