Friday, September 29, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಸೊರಬದ ಗಂಡುಗಲಿ ಕುಬಟೂರಿನ ಸರದಾರ ಸಾರೇಕೊಪ್ಪ ಬಂಗಾರಪ್ಪ ಅಂತಹ ಅಪರೂಪದ ಜನಾನುರಾಗಿ ಜನನಾಯಕ; ಯಡಿಯೂರಪ್ಪನವರಿಗೆ ಬಂಗಾರಪ್ಪನವರಿಗೂ ಇರುವ ವ್ಯತ್ಯಾಸವೇನು ಗೊತ್ತೇ?:

Shwetha by Shwetha
July 30, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Marjala manthana soraba bangarappa
Share on FacebookShare on TwitterShare on WhatsappShare on Telegram

ಸೊರಬದ ಗಂಡುಗಲಿ ಕುಬಟೂರಿನ ಸರದಾರ ಸಾರೇಕೊಪ್ಪ ಬಂಗಾರಪ್ಪ ಅಂತಹ ಅಪರೂಪದ ಜನಾನುರಾಗಿ ಜನನಾಯಕ; ಯಡಿಯೂರಪ್ಪನವರಿಗೆ ಬಂಗಾರಪ್ಪನವರಿಗೂ ಇರುವ ವ್ಯತ್ಯಾಸವೇನು ಗೊತ್ತೇ?: Marjala manthana soraba bangarappa

ಇಂದಿನ ರಾಜಕಾರಣದ ಮೇಲಾಟ, ತಳ್ಳಾಟ, ಎಳೆದಾಟ ಬಡಿದಾಟಗಳನ್ನು ನೋಡುತ್ತಿದ್ದಾಗ ಅಚಾನಕ್ಕಾಗಿ ಸಕಾರಣವಾಗಿ ನೆನಪಾದ ಹೆಸರು ಈ ರಾಜ್ಯ ಕಂಡ ನಿಜವಾದ ಜನನಾಯಕ ಮತ್ತು ಹಿಂದುಳಿದ ವರ್ಗಗಳ ಆಶಾಕಿರಣ, ಸೋಲಿಲ್ಲದ ಸರದಾರ ಎನ್ನುವ ಸಾತ್ವಿಕ ಗತ್ತಿನಲ್ಲಿ ಬೀಗುತ್ತಿದ್ದ ಕನ್ನಡನಾಡಿನ ಕಣ್ಮಣಿ, ಸಾರೇಕೊಪ್ಪ ಬಂಗಾರಪ್ಪ. ಈಗೀಗಿನ ರಾಜಕಾರಣದಲ್ಲಿ ಯಾರು ಬೇಕಾದರೂ ಹಣ ಚೆಲ್ಲಿ ಜನನಾಯಕನ ಪಟ್ಟ ಎರವಲು ಪಡೆದುಕೊಳ್ಳಬಹುದು. ಆದರೆ ನಿಜವಾದ ಜನನಾಯಕ ಅಂಕಿತ ಸೂಕ್ತವಾಗಿ ಹೊಂದುತ್ತಿದ್ದಿದ್ದು ಅಪ್ಪಟ ಸಮಾಜವಾದಿ ಹಿನ್ನೆಲೆಯ ಬಂಗಾರಪ್ಪನವರಿಗೆ ಮಾತ್ರ. ಇವತ್ತು ಯಡಿಯೂರಪ್ಪ ಸಾರಥ್ಯದ ಭಾರತೀಯ ಜನತಾ ಪಕ್ಷ ಈ ಮಟ್ಟದ ದೈತ್ಯ ಬೆಳವಣಿಗೆ ಕಂಡಿದ್ದರೆ ಈ ಬೆಳವಣಿಗೆಗೆ ಅಸಲಿ ಚಿಮ್ಮುಹಲಗೆಯಾಗಿದ್ದು ಇದೇ ಬಂಗಾರಪ್ಪ. 40ರಷ್ಟಿದ್ದ ಕಮಲ ಪಕ್ಷದ ಸೀಟುಗಳನ್ನು 70ರ ಗಡಿ ದಾಟಿಸಿದ್ದು ಬಂಗಾರಪ್ಪ ಎಂಬ ಚಾಲಕ ಶಕ್ತಿ. ಆನಂತರ ಬೆಳೆದಿದ್ದು ಯಡಿಯೂರಪ್ಪ ಎಂಬ ಇನ್ನೊಬ್ಬ ಸೈಂದವ ನಾಯಕನೇ ವಿನಃ ಭಾಜಪಾ ಅಲ್ಲ. ದಿವಂಗತ ಅನಂತ್‌ ಕುಮಾರ್‌ ಹೊರತುಪಡಿಸಿದರೆ ಇವತ್ತಿಗೂ ಭಾಜಪಾದಲ್ಲಿ ಪಕ್ಷವನ್ನು ಸಂಘಟಿಸುವ ಚಾತುರ್ಯವಿರುವ ಇನ್ನೊಬ್ಬ ಜನನಾಯಕ ಇಲ್ಲ; ಹೀಗಾಗಿಯೇ ಕಮಲಪಕ್ಷಕ್ಕೆ ಯಡಿಯೂರಪ್ಪ ಅನಿವಾರ್ಯವೆನಿಸಿರುವುದು. ಅದೊಂದು ಚುನಾವಣೆಯಲ್ಲಿ ಬಂಗಾರಪ್ಪ ಕಮಲ ಮುಡಿಯದೇ ಹೋಗಿದ್ದರೇ, ಭಾರತೀಯ ಜನತಾ ಪಕ್ಷ ಇಷ್ಟು ಎತ್ತರ ಏರುತ್ತಲೂ ಇರಲಿಲ್ಲ, ಅಧಿಕಾರ ಹಿಡಿಯುತ್ತಲೂ ಇರಲಿಲ್ಲ, ತನ್ನದೇ ಮತಬ್ಯಾಂಕ್‌ ಸೃಷ್ಟಿಸಿಕೊಳ್ಳುತ್ತಲೂ ಇರಲಿಲ್ಲ, ಹೀಗೆಲ್ಲಾ ರಾಡಿಯಾಗುತ್ತಲೇ ಇರಲಿಲ್ಲ. ದಕ್ಷಿಣ ಭಾರತದ ಹೆಬ್ಬಾಗಿಲು ತೆರೆದು ಕೇಸರಿ ಪಕ್ಷಕ್ಕೆ ಭವ್ಯ ಸ್ವಾಗತ ಕೋರಿದ ಶ್ರೇಯ ಯಡಿಯೂರಪ್ಪನವರಿಗೆ ಎಷ್ಟು ಸಲ್ಲುತ್ತದೋ ಅಷ್ಟೇ ಬಂಗಾರಪ್ಪನವ ಪಾತ್ರವೂ ಇದೆ. Marjala manthana soraba bangarappa
Marjala manthana soraba bangarappa
ಕರ್ನಾಟಕದ ಕೆಲವೇ ವರ್ಣರಂಜಿತ ರಾಜಕಾರಣಿಗಳಲ್ಲಿ ಎಸ್‌ ಬಂಗಾರಪ್ಪ ಪ್ರಮುಖರು ಹಾಗೂ ಹಠವಾದಿ ರಾಜಕಾರಣಿಗಳಲ್ಲಿ ಬಂಗಾರಪ್ಪ ಮೊದಲಿಗರು. ಬಂಗಾರಪ್ಪನವರಿಗೆ ಕರುನಾಡಿನ ನರನಾಡಿಗಳು ಅಂಗೈಗೆರೆಗಳಷ್ಟೇ ಸ್ಪಷ್ಟ. ಮಲೆನಾಡಿನ ಮೂಲೆ ಸೊರಬದ ಮಣ್ಣಿನ ನಾಯಕನಿಗೆ ಗಡಿನಾಡು ಬೀದರ್‌ನ ರೋಣದಲ್ಲಿಯೂ ಅಭಿಮಾನಿಗಳಿದ್ದರು. ಇತ್ತ ಹಳೇ ಮೈಸೂರು ಪ್ರಾಂತ್ಯದಿಂದ ಅತ್ತ ಕರಾವಳಿಯ ಬೆಸ್ತ-ಬಂಟ-ಬಿಲ್ಲವರ ಸಮುದಾಯದವರೆಗೆ, ಪಡುವಣದ ಹೆಬ್ಬಾಗಿಲು ಕೋಲಾರದ ಕೊನೆಯ ಗ್ರಾಮದಿಂದ ಚಾಮರಾಜನಗರ ತಮಿಳಿನ ಸೀಮೆಯತನಕ ಬಂಗಾರಪ್ಪನವರ ಹೆಸರು ಕೇಳಿದರೆ ಇಂದಿಗೂ ಪುಳಕಿತರಾಗುವ ಮಂದಿ ಇದ್ದಾರೆ. ಮಲೆನಾಡಿನ ಕೆಳವರ್ಗ ದೀವರ ಸಮುದಾಯದ ಧೀರೋದ್ಧಾತ ನಾಯಕ ಬಂಗಾರಪ್ಪ ಆನೆ ನಡೆದಿದ್ದೇ ಹಾದಿ ಎಂಬಂತೆ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಒಂಟಿ ಸಲಗದಂತೆ ನಡೆದಾಡಿದವರು. ಅವರ ಹಠದ ತೀವ್ರತೆ ಎಷ್ಟಿತ್ತೆಂದರೆ ಪಕ್ಷ ಕಟ್ಟಲು ಹಗಲಿರುಳು ಸಂಚರಿಸುತ್ತಿದ್ದ ಬಂಗಾರಪ್ಪ, ತಮ್ಮ ಅಹಂಗೆ ಧಕ್ಕೆಯಾದರೇ ಅದೇ ಪಕ್ಷ ಅಧಿಕಾರ ಕಳೆದುಕೊಳ್ಳುವ ತನಕ ವಿರಮಿಸುತ್ತಿರಲಿಲ್ಲ. ಯಾವಾಗ ಬಂಗಾರಪ್ಪ ಕಾಂಗ್ರೆಸ್‌ ತೊರೆದಿದ್ದರೋ ಆಗೆಲ್ಲ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ ಅನ್ನುವುದು ಇದಕ್ಕೆ ಸಾಕ್ಷಿ.

Related posts

ಇಂದು ಗೋಚರಿಸಲಿದೆ ಕೊನೆಯ `ಸೂಪರ್ ಮೂನ್’

ಇಂದು ಗೋಚರಿಸಲಿದೆ ಕೊನೆಯ `ಸೂಪರ್ ಮೂನ್’

September 28, 2023
ಬೆಂಗಳೂರಿಗನ ಶಿಲಾಶಾಸನ ಪ್ರೇಮಕ್ಕೆ ಮೋದಿ ಪ್ರಶಂಸೆ

ಹೀಗೆ ಮಾಡಿದರೆ ಪತ್ನಿ, ಪತಿ 10 ಸಾವಿರ ಪಡೆಯಬಹುದು!

September 28, 2023

ಈ ನಾಡು ಕಂಡ ಅತ್ಯಂತ ಶ್ರೇಷ್ಠ ಮುತ್ಸದ್ಧಿ, ಜನಪರ ಕಾಳಜಿಯುಳ್ಳ ಧೀಮಂತ ನಾಯಕ ಸಾರೆಕೊಪ್ಪ ಬಂಗಾರಪ್ಪ 1990ರ ಅಕ್ಟೋಬರ್ 17ರಿಂದ 1992ರ ನವೆಂಬರ್ 19ರವರೆಗೆ ಅಂದರೆ ಎರಡು ವರ್ಷ ಈ ರಾಜ್ಯದ 12ನೆಯ ಮುಖ್ಯಮಂತ್ರಿ ಆಗಿದ್ದವರು‌. ಬಡವರ ಪಾಲಿಗೆ ಆರಾಧ್ಯ ದೈವ ಎಂದೇ ಕರೆಸಿಕೊಂಡ ಅವರು, ತಮಗೆ ಸಿಕ್ಕ ಅತ್ಯಂತ ಕಡಿಮೆ ಅವಧಿಯಲ್ಲೇ ಜಾರಿಗೆ ತಂದ ಬಡವರಿಗೆ ಸೂರು ಕಲ್ಪಿಸುವ ಆಶ್ರಯ, ೩೬ ಪ್ರಮುಖ ದೇವಾಲಯಗಳ ಪುನರುಜ್ಜೀವನಗೊಳಿಸುವ ಆರಾಧನಾ, ಸಾಕ್ಷರೆತೆಗಾಗಿ ಅಕ್ಷರ ತುಂಗಾದಂತಹ ಯೋಜನೆಗಳನ್ನು ಜಾರಿಗೆ ತಂದರು. ಗ್ರಾಮೀಣ ಕೃಪಾಂಕದಡಿಯಲ್ಲಿ ಅದೆಷ್ಟೋ ಕೆಳ ಮಧ್ಯಮವರ್ಗದ ಮಹಿಳೆಯರಿಗೆ ಶಾಲೆಗಳ ಟೀಚರ್‌ ಕೆಲಸ ಕೊಡಿಸಿ ಅವರ ಆರ್ಥಿಕ ಮಟ್ಟ ಸುಧಾರಿಸಿದರು. ಕಾವೇರಿ ಬಿಕ್ಕಟ್ಟು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಿ ಭಲೆ ಗಂಡುಮಗ ಎನಿಸಿಕೊಂಡರು. ಆಗಿನ ಸರ್ಕಾರದಲ್ಲಿ 80 ಶಾಸಕರು ಪ್ರತಿನಿಧಿಸುವ ಹಲವು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಲೆನಾಡು ಪ್ರದೇಶ ಅಭಿವೃದ್ದಿಗಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿದರು.

ಬಂಗಾರಪ್ಪನವರನ್ನು ನೆನಪಿಸಿಕೊಳ್ಳಲು ಅನೇಕ ಕಾರಣಗಳು ಈ ಕಾಲಘಟ್ಟದಲ್ಲಿ ಎದುರಾಗುತ್ತವೆ. 1983ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಂಗಾರಪ್ಪ ತಮ್ಮ ಸ್ವಂತ ಕ್ಷೇತ್ರವಾಗಿದ್ದ ಸೊರಬಕ್ಕೆ ಕಾಲಿಡದೆ, ಇಡೀ ರಾಜ್ಯ ಸುತ್ತಿ ಪ್ರಚಾರ ಮಾಡಿದ್ದರು. ಪರಿಣಾಮವಾಗಿ ಕಾಂಗ್ರೆಸೇತರ ಸರ್ಕಾರ ರಚನೆಯಾಯಿತು. ತತ್ಪರಿಣಾಮವೇ ಆಗ ಅಜ್ಞಾತವಾಸದಲ್ಲಿದ್ದ ರಾಮಕೃಷ್ಣ ಹೆಗಡೆ ಎಂಬ ನಾಯಕ ಮುಖ್ಯಮಂತ್ರಿ ಕುರ್ಚಿಯಲ್ಲಿ ಪ್ರತಿಷ್ಟಾಪಿತರಾದರು. ರಾಮಕೃಷ್ಣ ಹೆಗಡೆ ಎಂಬ ವರ್ಚಸ್ವಿ ನಾಯಕ ಇಲ್ಲದೇ ಹೋಗಿದ್ದರೇ, ಬಂಗಾರಪ್ಪ ಆಗಲೇ ಮುಖ್ಯಮಂತ್ರಿಯಾಗಬೇಕಿತ್ತು. ಇಂದು ಭಾಜಪಾದ ಹೈಕಮಾಂಡ್‌ ಸಂಸ್ಕೃತಿ ನಗೆಪಾಟಲಿಗೆ ಈಡಾಗುತ್ತಿರುವ ಹೊತ್ತಿನಲ್ಲಿ ಮತ್ತೆ ಬಂಗಾರಪ್ಪ ನೆನಪಿಗೆ ಬರುತ್ತಾರೆ. 1990ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ಹೊತ್ತಿಗಾಗಲೇ ಅವರು ಅನೇಕ ಬಾರಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗುಡುಗಿದ್ದರು; ತೊಡೆ ತಟ್ಟಿ ನಿಂತಿದ್ದರು. 1992ರಲ್ಲಿ ಬಂಗಾರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು, ಅಂದಿನ ಪ್ರಧಾನಿ ಪಿ.ವಿ ನರಸಿಂಹ ರಾವ್‌, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ್‌ ಕೇಸರಿ ಮತ್ತು ಕೇರಳದ ಪ್ರಭಾವಿ ನಾಯಕ ಕರುಣಾಕರನ್‌, 1 ಕೋಟಿ 97 ಲಕ್ಷ ರೂಪಾಯಿ ಮೊತ್ತದ ಕ್ಲಾಸಿಕ್‌ ಕಂಪ್ಯೂಟರ್‌ ಹಗರಣ ಎನ್ನುವ ಷಡ್ಯಂತ್ರ ಹಣೆದರು. ಬಂಗಾರಪ್ಪನವರ ಜಾಗಕ್ಕೆ ವೀರಪ್ಪ ಮೊಯ್ಲಿ ನೇಮ್‌ ಪ್ಲೇಟ್‌ ಸಿದ್ಧವಾಗಿತ್ತು. ನೇರವಾಗಿ ದೆಹಲಿಗೆ ನಡೆದಿದ್ದ ಬಂಗಾರಪ್ಪ ನೇರಾನೇರ ನರಸಿಂಹ ರಾವ್‌ ಅವರಿಗೆ ಇದರ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಎಚ್ಚರಿಕೆ ಕೊಟ್ಟೇ ವಾಪಾಸಾಗಿದ್ದರು. ಕ್ಲಾಸಿಕ್‌ ಕಂಪ್ಯೂಟರ್‌ ಹಗರಣದ ಸಿಬಿಐ ತನಿಖೆ ಅವರನ್ನು ಹೈರಾಣಾಗಿಸಿತ್ತು. ಆದರೆ ಬಂಗಾರಪ್ಪ ಗಟ್ಟಿ ಮಣ್ಣಿನ ನಾಯಕ, ಎದೆಗುಂದುವ ಮಾತೇ ಇಲ್ಲ; ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಪ್ರಕರಣ ಖುಲಾಸೆಗೊಳಿಸಿಕೊಂಡರು. ವೀರಪ್ಪ ಮೊಯ್ಲಿಯ ನಂತರ ಮತ್ತೆ ಕಾಂಗ್ರೆಸೇತರ ಸರ್ಕಾರ ಜಾರಿಗೆ ಬಂದು ದೇವೇಗೌಡರು ಮುಖ್ಯಮಂತ್ರಿಯಾಗುವ ಹಿಂದೆ ಬಂಗಾರಪ್ಪನವರ ಬಂಡಾಯದ ಪರಿಣಾಮ ಇಲ್ಲದಿರಲಿಲ್ಲ.

1933 ರಲ್ಲಿ ಸೊರಬ ತಾಲೂಕಿನ ಕುಬಟೂರಿನಲ್ಲಿ ಜನಿಸಿದ ಬಂಗಾರಪ್ಪನವರು, ಬಿ.ಎ, ಎಲ್.ಎಲ್.ಬಿ ಪದವೀಧರ ‘ಸಮಾಜ ವಿಜ್ಞಾನದಲ್ಲಿ ಡಿಪ್ಲೊಮ ಗಳಿಸಿದವರು. ಅಂದಿನ ಖ್ಯಾತ ಸಮಾಜವಾದಿ ನಾಯಕ ಶಾಂತವೀರ ಗೋಪಾಲಗೌಡ ಮೆಚ್ಚಿನ ಶಿಷ್ಯರಾಗಿ 1967 ರಲ್ಲಿ ರಾಜಕಾರಣದ ಪಡಸಾಲೆಗೆ ರಂಗಪ್ರವೇಶ ಮಾಡಿದವರು. ಶಿವಮೊಗ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಬಂಗಾರಪ್ಪನವರು, ಮೂಲತಃ ಲೋಹಿಯಾ ಸಮಾಜವಾದಿ ಚಿಂತಕರು, ಸಾಮಾಜಮುಖಿ ಚಿಂತನೆಯೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಸಮಾಜವಾದಿ ಮೂಮೆಂಟ್‌ನಲ್ಲಿ ಪೋಸ್ಟರ್‌ ಅಂಟಿಸಿ, ಕಾಗೋಡು ಗೇಣಿ ಸತ್ಯಾಗ್ರಹದಲ್ಲಿ ಕೆಳಹಂತದ ಕಾರ್ಯಕರ್ತನಾಗಿ ಓಡಾಡಿ, ಲ್ಯಾಂಡ್‌ ರೆವಿನ್ಯೂ ಆಕ್ಟ್‌ ಜಾರಿಗೆ ಬಂದ ನಂತರ ಫಾರಂ ನಂಬರ್‌ 7 ಅನ್ನು ಬಡ ಗೇಣಿದಾರರಿಗೆ ಭರ್ತಿ ಮಾಡಿಕೊಡುತ್ತಿದ್ದವರು. 1967ರಲ್ಲಿ ತಮ್ಮ ಸೊರಬ ಕ್ಷೇತ್ರದಿಂದ ಸಂಯುಕ್ತ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 1972ರ ಚುನಾವಣೆಯಲ್ಲಿಯೂ ಸಂಯುಕ್ತ ಸಮಾಜವಾದಿ ಪಕ್ಷದಿಂದಲೇ ವಿಧಾನ ಸಭೆಗೆ ಮತ್ತೊಮ್ಮೆ ಆಯ್ಕೆಯಾದರು. ಬಳಿಕ ಸಮಾಜವಾದಿ ಪಾರ್ಟಿ ತೊರೆದು, ಕರ್ನಾಟಕ ಜನತಾ ರಂಗ ಸ್ಥಾಪಿಸಿದರು. 1972ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ತಮ್ಮ ಜೊತೆಯಲ್ಲಿಯೇ ಸಮಾಜವಾದಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಕೊಣಂದೂರು ಲಿಂಗಪ್ಪನವರನ್ನೂ ಕಾಂಗ್ರೆಸ್‌ ಮನೆ ಸೇರಿಸಿದರು. Marjala manthana soraba bangarappa

ಗುಂಡೂರಾವ್‌ ಸರ್ಕಾರದಲ್ಲಿ ಗೃಹ, ಲೋಕೋಪಯೋಗಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಸೊರಬದಿಂದ ವಿಧಾನ ಸಭೆಗೆ ಮತ್ತೆ ಚುನಾಯಿತರಾದರು, ಗುಂಡೂರಾವ್ ಜೊತೆ ಕೈ ಮಿಲಾಯಿಸಿ ಕರ್ನಾಟಕ ‘ಕ್ರಾಂತಿರಂಗ’ ಕಟ್ಟಿದರು. ಅವರು 1983ರಲ್ಲಿ ವಿಧಾನ ಸಭೆಗೆ ಮತ್ತೆ ಆಯ್ಕೆಯಾಗಿದ್ದು ಜನತಾ ಕ್ರಾಂತಿರಂಗ ಪಕ್ಷದಿಂದಲೇ. ಯಾವಾಗ ಬಂಗಾರಪ್ಪ ಪಕ್ಷ ಸಂಘಟಿಸಿ ಪ್ರತಿಫಲವಾಗಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರೂ, ಅಸಮಾಧಾನದಿಂದ ಕ್ರಾಂತಿರಂಗ ತೊರೆದು ಮತ್ತೆ ಕಾಂಗ್ರೆಸ್ ಮನೆಗೆ ಮರಳಿದರು. 1985ರ ಚುನಾವಣೆಯಲ್ಲಿ ಗೆದ್ದು, ವೀರೇಂದ್ರ ಪಾಟೀಲ್ ಸಂಪುಟದಲ್ಲಿ ಕೃಷಿ, ತೋಟಗಾರಿಕೆ ಸಚಿವರಾದರು. ನಂತರ ಮುಖ್ಯಮಂತ್ರಿಯೂ ಆದರು, ಎರಡೇ ವರ್ಷಕ್ಕೆ ಪದತ್ಯಾಗವನ್ನೂ ಮಾಡಿದರು. 1994ರಲ್ಲಿ ಮತ್ತೆ ಕಾಂಗ್ರೆಸ್‌ ತೊರೆದು ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಆ ಚುನಾವಣೆಯಲ್ಲಿ ಸೊರಬ ಮತ್ತು ಸಾಗರ ಎರಡೂ ಕ್ಷೇತ್ರಗಳಿಂದ ಉಮೇದುವಾರಿಕೆ ಸಲ್ಲಿಸಿದರು. ಆದರೆ ಸೊರಬದಲ್ಲಿ ಗೆಲುವಿನ ಸಿಹಿಯನ್ನೂ ಸಾಗರದಲ್ಲಿ ಸ್ವಜಾತೀಯ ನೇತಾರ ಕಾಗೋಡು ತಿಮ್ಮಪ್ಪನವರ ವಿರುದ್ಧ ಸೋಲಿನ ಕಹಿಯನ್ನೂ ಉಂಡರು.
Marjala manthana soraba bangarappa
1996ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ 1997ರಲ್ಲಿ ಪುನಃ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಆದರೆ ಬಂಗಾರಪ್ಪನವರ ಪಕ್ಷಾಂತರ ಪರ್ವ ಇಷ್ಟಕ್ಕೆ ನಿಲ್ಲಲಿಲ್ಲ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯಿತೆಂದು 1998ರಲ್ಲಿ ಕರ್ನಾಟಕ ವಿಕಾಸ ಪಕ್ಷ ಹುಟ್ಟುಹಾಕಿದರು. 1998ರಲ್ಲಿ ಲೋಕಸಭೆಯಲ್ಲಿ ಆಯನೂರು ಮಂಜುನಾಥ್‌ ವಿರುದ್ಧ ಶಿವಮೊಗ್ಗ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. 1999ರಲ್ಲಿ ಮರಳಿ ಕಾಂಗ್ರೆಸ್ ಸೇರಿ ಲೋಕಸಭೆ ಪ್ರವೇಶ ಪಡೆದರು ಹಾಗೆಯೇ ಪುನಃ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. 2004ರಲ್ಲಿ ಕಮಲ ಪಕ್ಷಕ್ಕೆ ಸೇರಿ ಲೋಕಸಭೆಗೆ ಆಯ್ಕೆಯಾದರು, ಮಧ್ಯದಲ್ಲೇ ಬಿಜೆಪಿಯ ಮಡಿವಂತಿಕೆಗೆ ಬೇಸತ್ತು ರಾಜೀನಾಮೆ ಬಿಸಾಕಿ ಸಮಾಜವಾದಿ ಸೈಕಲ್‌ ಹತ್ತಿದರು. 2005ರ ಜೂನ್‌ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಅದೇ ಸಮಾಜವಾದಿ ಪಕ್ಷದ ಲಾಂಚನದಡಿಯಲ್ಲೇ ಗೆದ್ದು ಬೀಗಿದರು. 2008ರಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪನವರ ವಿರುದ್ಧ ಸ್ಪರ್ಧಿಸಿ ಸೋಲಿಗೆ ಶರಣಾದರು. 2009ರಲ್ಲಿ ಅವಧಿಗೆ ಮುನ್ನ ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮತ್ತೆ ಕೊನೆಯ ಬಾರಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು. ಆಗ ಅಧಿಕಾರದಲ್ಲಿ ಬಿಎಸ್‌ವೈ ಸರ್ಕಾರದ ಹಣ ಮತ್ತು ಪ್ರಭಾವದ ಕಾರಣ ಯಡ್ಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ವಿರುದ್ಧ ಸೋಲು ಅನುಭವಿಸಿದರು. ತಮ್ಮ ರಾಜಕಾರಣದ ಕಟ್ಟಕಡೆಯ ಪ್ರಯೋಗವಾಗಿ 2010ರಲ್ಲಿ ಜೆಡಿಎಸ್ ಬಾಗಿಲು ಬಡಿದರು. ಅವರು ಕೊನೆಯುಸಿರೆಳೆಯುವಾಗ ಜೆಡಿಎಸ್‌ ಪಕ್ಷದಲ್ಲಿದ್ದರು. ಹೀಗೆ ಬಂಗಾರಪ್ಪ ಅನೇಕ ಬಾರಿ ಪಕ್ಷಗಳನ್ನು ಬದಲಾಯಿಸಿದರು. ಆದರೆ ಅವರ ಮತದಾರರು ಮತ್ತು ಅಭೀಮಾನಿಗಳು ಅವರನ್ನು ಬದಲಾಯಿಸಲಿಲ್ಲ. ಯಾವ ಪಕ್ಷಗಳೂ ಬಂಗಾರಪ್ಪನವರಿಗೆ ಅನಿವಾರ್ಯವಾಗಿರಲಿಲ್ಲ; ಬಂಗಾರಪ್ಪನವರೇ ಆಯಾ ಪಕ್ಷಗಳಿಗೆ ಅನಿವಾರ್ಯವಾಗಿದ್ದರು. ಬಂಗಾರಪ್ಪ ಖುದ್ದು ಒಂದು ಪಕ್ಷವಾಗಿದ್ದರು. ಅವರಿಂದ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಹೆಚ್ಚು.

ಅತಿ ಹೆಚ್ಚು ಪಕ್ಷಾಂತರ ಮಾಡಿದ, ಅತಿ ಹೆಚ್ಚು ಪಕ್ಷಗಳನ್ನು ಸ್ಥಾಪಿಸಿದ ದಾಖಲೆ ಹೊಂದಿರುವ ಬಂಗಾರಪ್ಪನವರನ್ನು “ಶಾಸಕರನ್ನು ತಯಾರಿಸುವ ಫ್ಯಾಕ್ಟರಿ”ಯೆಂದೇ ಗುರುತಿಸಲಾಗುತ್ತಿತ್ತು. ಬಂಗಾರಪ್ಪ ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಇದ್ದರೂ ಕೇವಲ ನಾಮಪತ್ರ ಸಲ್ಲಿಸಿಬಿಟ್ಟರೂ ಸಾಕು, ಸೊರಬದ ಜನ ದೊಡ್ಡಸಾಹೇಬ್ರನ್ನು ಮರೆಯದೇ ಗೆಲ್ಲಿಸುತ್ತಿದ್ದರು ಅನ್ನುವುದು ಅವರೇ ಸೃಷ್ಟಿಸಿದ ಇತಿಹಾಸ. ಬಂಗಾರಪ್ಪ ಅದೆಷ್ಟು ಹಠವಾದಿಯೆಂದರೆ ತಮ್ಮೊಂದಿಗೆ ನಿಲ್ಲದೇ ಎಸ್‌.ಎಂ ಕೃಷ್ಣ ಪರವಾಗಿ ನಿಂತ ಒಂದೇ ಕಾರಣಕ್ಕೆ ಸಾಯುವತನಕ ತಮ್ಮ ಹಿರಿಯ ಮಗ ಕುಮಾರ ಬಂಗಾರಪ್ಪನವರನ್ನು ದೂರವಿಟ್ಟರು. ಅನೇಕ ಬಾರಿ ಚುನಾಯಿತರಾಗಿ ಆಯ್ಕೆಯಾದ ಬಂಗಾರಪ್ಪನವರು ಜನಪ್ರತಿನಿಧಿಯಾಗಿಯೇ ಬಹುಕಾಲ ಉಳಿದರೇ ವಿನಃ ಅಧಿಕಾರ ಅನುಭವಿಸಿದ್ದು ಕಡಿಮೆ. ಆದರೂ ಅವರ ಹಿಂದೆ ದೊಡ್ಡ ಶಾಸಕರ ಹಿಂಡು ಸದಾ ಇರುತ್ತಿತ್ತು. ಬಂಗಾರಪ್ಪನವರು ಗುಡುಗಿದರೆ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ಪತರಗುಟ್ಟುತ್ತಿತ್ತು. ಅದು ಬಂಗಾರಪ್ಪನವರ ತಾಕತ್ತು.

ಬಂಗಾರಪ್ಪ ಕಾಂಗ್ರೆಸ್‌ ಬಿಡುತ್ತಾರೆ ಎನ್ನುವ ಸನ್ನಿವೇಶ ಎದುರಾದಾಗಲೆಲ್ಲ ಕಾಂಗ್ರೆಸ್‌ ದೊಡ್ಡ ಮಟ್ಟದ ಡ್ಯಾಮೇಜ್‌ ಅನುಭವಿಸಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬಂಗಾರಪ್ಪನವರಿಗೂ ಯಡಿಯೂರಪ್ಪನವರಿಗೂ ಹೋಲಿಕೆಯೇ ಇಲ್ಲ. ಯಡಿಯೂರಪ್ಪನವರಿಗೆ ಈಗಿರುವ ದೊಡ್ಡ ಲಿಂಗಾಯಿತ ವೀರಶೈವ ಶಾಶ್ವತ ಮತಬ್ಯಾಂಕ್‌ ಬಂಗಾರಪ್ಪನವರಿಗೆ ಇರಲಿಲ್ಲ. ಅವರು ಸರ್ವಜನಾಂಗದ ನಾಯಕರಾಗಿದ್ದರು. ಮೇಲ್ವರ್ಗದ ಬ್ರಾಹ್ಮಣ, ಲಿಂಗಾಯಿತರಿಂದ ಹಿಡಿದು ಈಡಿಗ, ಬಿಲ್ಲವ, ಒಕ್ಕಲಿಗ, ಕುರುಬ, ದಲಿತ, ಅಲ್ಪಸಂಖ್ಯಾತ ಸಮುದಾಯದ ಬಹುತೇಕರು ಬಂಗಾರಪ್ಪನವರ ಮೋಡಿಗೆ ಒಳಗಾಗುತ್ತಿದ್ದರು. ಶಿವಮೊಗ್ಗ ರಾಜಕಾರಣದಲ್ಲಿ ಬಂಗಾರಪ್ಪ ಹಾಗೂ ಇನ್ನೊಬ್ಬ ಸಮಾಜವಾದಿ, ಅವರದ್ದೇ ಸಮುದಾಯದ ಧುರೀಣ ಕಾಗೋಡು ತಿಮ್ಮಪ್ಪನವರ ಸಂಬಂಧ ಮೊದಲಿನಿಂದಲೂ ಎಣ್ಣೇ ಸೀಗೇಕಾಯಿಯೇ. ಬಂಗಾರಪ್ಪ ಕಾಂಗ್ರೆಸ್‌ನಲ್ಲಿ ಪ್ರಭಾವಿಯಾಗಿದ್ದಾಗೆಲ್ಲಾ ಕಾಗೋಡು ತಿಮ್ಮಪ್ಪ ಮೂಲೆಗುಂಪಾಗಿದ್ದರು. 94ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಲೆಂದೇ ಬಂಗಾರಪ್ಪ ಸಾಗರದಿಂದ ಸ್ಫರ್ಧಿಸಿದರಾದ್ರೂ, ಕಾಗೋಡು ಜಯಸಾಧಿಸಿದ್ರೆ ಬಂಗಾರಪ್ಪ ಸೋಲಿನ ಕಹಿ ಉಂಡು ಮೂರನೆಯ ಸ್ಥಾನಕ್ಕೆ ಕುಸಿದ್ರು. 2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾದಾಗ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಲು ಅವರ ಅಳಿಯ ಬೇಳೂರು ಗೋಪಾಲಕೃಷ್ಣರನ್ನು ರಾಜಕೀಯವಾಗಿ ಬೆಳಿಸಿದ್ರು. ಆ ಚುನಾವಣೆಯಲ್ಲಿ ಬಂಗಾರಪ್ಪ ಹಣೆದ ವ್ಯೂಹವೇ ಉರುಳಾಗಿ ಕಾಗೋಡು ತಿಮ್ಮಪ್ಪ ಹೀನಾಯವಾಗಿ ಸೋಲನ್ನು ಅನುಭವಿಸಿದ್ರು.

ಬಂಗಾರಪ್ಪನವರ ಬಗೆಗಿನ ಅನೇಕ ಆಶ್ಚರ್ಯಕರ ಸಂಗತಿಗಳಿವೆ. ಅವರನ್ನು ಕರ್ನಾಟಕ ರಾಜಕಾರಣದ ಪರ್ಯಾಯ ಶಕ್ತಿ ಎಂದೇ ಗುರುತಿಸಲಾಗುತ್ತಿತ್ತು. ಅವರಿಗೆ ಅತ್ಯಂತ ಆಳದ ಸ್ಮರಣ ಶಕ್ತಿಯಿತ್ತು. 2೦ ವರ್ಷಗಳ ಹಿಂದೆ ನೋಡಿದ ಕಾರ್ಯಕರ್ತನನ್ನು ಹೆಸರು ಹಿಡಿದು ಮಾತಾಡಿಸಿ, ಅವನ ಕುಟುಂಬದ ಯೋಗಕ್ಷೇಮ ವಿಚಾರಿಸುವಷ್ಟು ನೆನಪಿನ ಶಕ್ತಿ ಅವರದ್ದು. ಕರ್ನಾಟಕದ ರಾಜಕಾರಣದಲ್ಲಿ ಹೀಗೆ ಗಜಗಾತ್ರದ ನೆನಪಿನ ಶಕ್ತಿ ಹೊಂದಿದ ಇಬ್ಬರೇ ನಾಯಕರಲ್ಲಿ ಒಬ್ಬರು ಧರಮ್‌ ಸಿಂಗ್‌ ಆದರೆ ಮತ್ತೊಬ್ಬರು ಬಂಗಾರಪ್ಪ. ಬನವಾಸಿಯ ಬಳಿಯ ಗುಡ್ನಾಪುರ ಎಂಬ ಗ್ರಾಮದ ದೊಡ್ಡ ಕೆರೆ ಮಧ್ಯೆ ಇರುವ ಬಂಗಾರೇಶ್ವರ ಸ್ವಾಮಿಯ ಹೆಸರನ್ನೇ, ಹರಕೆ ಹೊತ್ತು ಹುಟ್ಟಿದ ಬಂಗಾರಪ್ಪನವರಿಗೆ ಇಡಲಾಗಿತ್ತು. ಇವರ ಇಬ್ಬರು ಸಹೋದರಿಯರಿಗೆ ದೊಡ್ಡ ಕೆರಿಯಮ್ಮ ಮತ್ತು ಸಣ್ಣ ಕೆರಿಯಮ್ಮ ಎನ್ನುವ ಹೆಸರಿಡಲಾಗಿತ್ತು. ಬಂಗಾರಪ್ಪನವರದು ಈಡಿಗ ಕುಲದ ಉಪವರ್ಗ ಮಲೆನಾಡಿನ ತೆಂಗಿನ ದೀವರ ಸಮುದಾಯದ ಉಪಜಾತಿ ನಾಯ್ಕ್.

ಸಿರಸಿಯ ಮಳಲಗಾವ್‌ ಊರಿನವರಾದ ಇವರ ಪತ್ನಿ ಶಕುಂತಲಮ್ಮ ಅತ್ಯಂತ ವಾತ್ಸಲ್ಯಮಯಿ. ಸೊರಬದಲ್ಲಿ ಎಲ್ಲೇ ಶುಭ ಕಾರ್ಯಗಳಾದರೂ, ಸಾವು ನೋವುಗಳಾದರೂ ಬಂಗಾರಪ್ಪ ಕ್ಷೇತ್ರದಲ್ಲಿದ್ದರೇ ತಮ್ಮ ಪತ್ನಿ ಶಕುಂತಲಮ್ಮನವರನ್ನು ಕರೆದುಕೊಂಡು ಹೋಗುತ್ತಿದ್ದರು. ಅದೆಷ್ಟೋ ಮದುವೆ ಮುಂಜಿಗಳ ಮೊದಲ ಆಹ್ವಾನ ಪತ್ರಿಕೆ ಬಂಗಾರಪ್ಪಾಜಿ ಕುಟುಂಬಕ್ಕೆ ನೀಡುವ ಪರಂಪರೆ ರೂಢಿಯಲ್ಲಿತ್ತು. ಮದುವೆಗೆ ಕರೆಯಲು ಬರುವವರಿಗೆ ಶಕುಂತಲಮ್ಮ ಒಂದಷ್ಟು ಧನಸಹಾಯ ಮಾಡುತ್ತಿದ್ದರು. ಇದಕ್ಕೆಂದೇ ಅವರ ಚಂದ್ರಹಾಸ ಟ್ರಸ್ಟ್‌ನಲ್ಲಿ ಹಣ ಇಡಲಾಗಿತ್ತು. ಬಂಗಾರಪ್ಪ ಕ್ಷೇತ್ರದ ಜನರ ಜೊತೆ ಹೀಗೆ ನಿಕಟವಾದ ಒಡನಾಟ ಇಟ್ಟುಕೊಂಡಿದ್ದರಿಂದಲೇ ಅವರನ್ನು ಜನ ಸದಾ ಗೆಲ್ಲಿಸುತ್ತಿದ್ದರು. ಬಂಗಾರಪ್ಪನವರ ಒಬ್ಬಳು ಪುತ್ರಿ ಗೀತಾ, ವರನಟ ರಾಜ್‌ಕುಮಾರ್‌ ಸೊಸೆ-ಶಿವರಾಜ್‌ಕುಮಾರ್‌ ಪತ್ನಿ, ಇನ್ನೊಬ್ಬ ಪುತ್ರಿ ಪ್ರಜಾವಾಣಿ ಪತ್ರಿಕೆ ಮಾಲೀಕರಾದ ತಿಲಕ್‌ಕುಮಾರ್‌ ಪತ್ನಿ.
Marjala manthana soraba bangarappa
ಕಲರ್‌ ಫುಲ್‌ ರಾಜಕಾರಣಿ ಬಂಗಾರಪ್ಪ ಸದಾ ಮಿರಿಮಿರಿ ಮಿಂಚುವ ಬಣ್ಣಬಣ್ಣದ ಬಟ್ಟೆ ಕಣ್ಣಿಗೊಂದು ಕೂಲಿಂಗ್‌ ಗ್ಲಾಸ್‌ ಹಾಕುತ್ತಿದ್ದರು. ಬಿಎ ಕಲಿಯುವಾಗ ಕನ್ನಡ ಸಾಹಿತ್ಯ ಅಭ್ಯಾಸ ಮಾಡಿದ್ದ ಅವರು ಕುವೆಂಪು, ಡಿವಿಜಿ, ಬೇಂದ್ರೆಯವರ ಪದ್ಯಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದರು. ಸಂಗೀತದ ಬಗ್ಗೆ ಅತೀವ ಆಸಕ್ತಿಯಿದ್ದ ಅವರು ಸ್ವತಃ ವೀಣೆ ನುಡಿಸುತ್ತಿದ್ದರು. ಜನಪದ ಕ್ಷೇತ್ರದ ವಿದ್ಯಾರ್ಥಿಯಂತೆ ಡೊಳ್ಳು ಬಡಿಯುತ್ತಿದ್ದರು. ಇಳಿವಯಸ್ಸಿನಲ್ಲಿಯೂ ಯೋಗ ಮಾಡುತ್ತಿದ್ದರು ಹಾಗೂ ಟೆನ್ನಿಸ್‌ ಆಡುತ್ತಿದ್ದರು. ಒಟ್ಟಾರೆ ಅವರ ವ್ಯಕ್ತಿತ್ವ ಮತ್ತು ಜೀವನಶೈಲಿಯೇ ವರ್ಣರಂಜಿತ. ಜಿದ್ದಿಗೆ ಬಿದ್ದರೆ ಬಂಗಾರಪ್ಪ ಯಾರನ್ನೂ ಮಣಿಸದೇ ಬಿಡುತ್ತಿರಲಿಲ್ಲ. ಕಾಂಗ್ರೆಸ್‌ನಲ್ಲಿದ್ದಾಗ ಅವರ ಆಪ್ತರಾಗಿದ್ದ ಜನಾರ್ಧನ್‌ ಪೂಜಾರಿ ಬಂಗಾರಪ್ಪ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಾಗ “ಮರದಿಂದ ಮರಕ್ಕೆ ಹಾರುವ ಮಂಗ” ಎಂದು ಅಣಕಿಸಿದ್ದರು. ಇದಕ್ಕೆ ನೇರಾನೇರ ಪ್ರತಿಕ್ರಯಿಸಿದ್ದ ಬಂಗಾರಪ್ಪ, “ಮಂಗ ಹನುಮಂತ ರಾಮನ ಭಂಟ, ನಾನು ಮಂಗನಾಗುವುದಕ್ಕೆ ಹೆಮ್ಮೆ ಪಡುತ್ತೇನೆ, ನಿಮ್ಮಂತೆ ವಿದೇಶಿ ಮಾತೆಯ (ಸೋನಿಯಾ ಗಾಂಧಿ) ಗರ್ಭಗುಡಿಯ ಪೂಜಾರಿ ಆಗಲಾರೆ, ಕಾಂಗ್ರೆಸ್‌ ಎಂಬ ಲಂಕೆಗೆ ಈ ಮಂಗ ಬೆಂಕಿ ಹಚ್ಚದೆ ಬಿಡುವುದಿಲ್ಲ” ಎಂದು ತೀಕ್ಷ್ಣವಾಗಿ ಉತ್ತರಿಸಿದ್ದರು. ಹಿಂದೊಮ್ಮೆ ರಾಜ್ಯದಲ್ಲಿ ಬರ ಬಂದಾಗ ಲೋಡುಗಟ್ಟಲೇ ಲಾರಿಗಳಲ್ಲಿ ಧಾನ್ಯಗಳನ್ನು ತುಂಬಿ ಜನರಿಗೆ ಹಂಚಿದ ಅಂತಃಕರಣವುಳ್ಳ ಪ್ರಜಾಸೇವಕ ಬಂಗಾರಪ್ಪ.

ಹೀಗಿದ್ದ ಬಂಗಾರಪ್ಪನವರಿಗೆ 2009ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ ಅವರನ್ನು ಎದುರಿಸಲು ಹಣವೇ ಇರಲಿಲ್ಲ. ಹಣವಿಲ್ಲ ಎನ್ನುವ ಕಾರಣಕ್ಕೆ ಅವರ ಆಪ್ತರು ಅವರಿಂದ ದೂರಸರಿದರು. ಆದರೆ ಬಂಗಾರಪ್ಪ ಮಾತ್ರ, “ಅಧಿಕಾರದಲ್ಲಿರೋ ಯಡಿಯೂರಪ್ಪ ಹಣ ಖರ್ಚು ಮಾಡಲಿ, ಜನ ಹಣಕ್ಕೆ ಮತ ಹಾಕುತ್ತಾರೋ ಬಂಗಾರಪ್ಪನಿಗೆ ಮತ ಹಾಕುತ್ತಾರೋ ನೋಡ್ತೀನಿ” ಎಂದು ಗುಡುಗಿದ್ದರು. ಫಲಿತಾಂಶ ಬಂದ ದಿನ ಮತ ಎಣಿಕೆಯ ಬೂತ್‌ಗಳಲ್ಲಿ ಬಂಗಾರಪ್ಪನ ಕಡೆಯ ಪ್ರತಿನಿಧಿಗಳೇ ಇರಲಿಲ್ಲ. ಆದರೂ ಅಧಿಕಾರ, ಪ್ರಭಾವ, ಕೋಟಿಗಟ್ಟಲೇ ಹಣ ಸುರಿದರೂ ರಾಘವೇಂದ್ರ ಗೆದ್ದಿದ್ದು 50 ಸಾವಿರ ಚಿಲ್ಲರೆ ಮತಗಳಿಂದ ಅಷ್ಟೆ. ಬಂಗಾರಪ್ಪ ಅಂದಿನ ಚುನಾವಣೆಯನ್ನು ಧೀರೋದ್ಧಾತವಾಗಿ ಎದುರಿಸಿ ನೈತಿಕವಾಗಿ ಗೆದ್ದಿದ್ದರು. ಅಂತಹ ಬಂಗಾರಪ್ಪ ಕೊನೆಯ ಗಳಿಗೆಯಲ್ಲಿ ಇರಲು ಸ್ವಂತ ಮನೆಯೂ ಇಲ್ಲದಂತೆ ಬಾಡಿಗೆ ಮನೆಯಲ್ಲಿ ಕಾಲಕಳೆದರು. 79ರ ಇಳಿವಯಸ್ಸಿನಲ್ಲಿ ಮೂತ್ರಪಿಂಡದ ವೈಫಲ್ಯದಿಂದ ಇಹದ ವ್ಯವಹಾರ ಮುಗಿಸಿದ ಬಂಗಾರಪ್ಪನವರಿಗೆ ಇಡೀ ರಾಜ್ಯವೇ ಕಣ್ಣೀರು ಸುರಿಸಿ ಅಂತಿಮ ವಿಧಾಯ ಹೇಳಿತು. ನಿಜವಾದ ಜನನಾಯಕ ಎಂದರೆ ಸತ್ತ ನಂತರವೂ ಬದುಕಿರುವವನು. ಸೊರಬದ ಗಂಡುಗಲಿ ಕುಬಟೂರಿನ ಸರದಾರ ಸಾರೇಕೊಪ್ಪ ಬಂಗಾರಪ್ಪ ಅಂತಹ ಅಪರೂಪದ ಜನನಾಯಕ..

–ವಿಶ್ವಾಸ್‌ ಭಾರದ್ವಾಜ್‌

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

 

Tags: marjala manthanasoraba bangarappa
ShareTweetSendShare
Join us on:

Related Posts

ಇಂದು ಗೋಚರಿಸಲಿದೆ ಕೊನೆಯ `ಸೂಪರ್ ಮೂನ್’

ಇಂದು ಗೋಚರಿಸಲಿದೆ ಕೊನೆಯ `ಸೂಪರ್ ಮೂನ್’

by Honnappa Lakkammanavar
September 28, 2023
0

ಸೂಪರ್ ಮೂನ್ ಗಳ ಸರಣಿಯಲ್ಲಿ ಇಂದು ರಾತ್ರಿ ಕೊನೆಯ ಮೂನ್ ಗೋಚರಿಸಲಿದೆ. ಈ ವರ್ಷ ಜುಲೈ 3, ಆಗಸ್ 1, ಆಗಸ್ಟ್ 31ರ ನಂತರ ಸೆಪ್ಟೆಂಬರ್ 29ರಂದು...

ಬೆಂಗಳೂರಿಗನ ಶಿಲಾಶಾಸನ ಪ್ರೇಮಕ್ಕೆ ಮೋದಿ ಪ್ರಶಂಸೆ

ಹೀಗೆ ಮಾಡಿದರೆ ಪತ್ನಿ, ಪತಿ 10 ಸಾವಿರ ಪಡೆಯಬಹುದು!

by Honnappa Lakkammanavar
September 28, 2023
0

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲು...

ಕೋಳಿ ಸಾಕಣೆಗೆ ತೆರಿಗೆ ಸಲ್ಲ

ಮಾಂಸಾಹಾರಿಗಳಿಗೆ ಶಾಕ್

by Honnappa Lakkammanavar
September 27, 2023
0

ಶ್ರಾವಣ ಮಾಸ ಹಾಗೂ ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಚಿಕನ್ ಹಾಗೂ ಮಟನ್ ಪ್ರಿಯರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಹೀಗಾಗಿ ದರದಲ್ಲಿ ಕೂಡ ಏರಿಕೆಯಾಗಿದೆ. ಉತ್ಪಾದನೆ ವೆಚ್ಚ ಏರಿಕೆಯಾದ...

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…

by admin
September 26, 2023
0

ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...

ಕೋಳಿ ಸಾಕಣೆಗೆ ತೆರಿಗೆ ಸಲ್ಲ

ಕೋಳಿ ಸಾಕಣೆಗೆ ತೆರಿಗೆ ಸಲ್ಲ

by Honnappa Lakkammanavar
September 23, 2023
0

ಬೆಂಗಳೂರು: ಕೋಳಿ ಸಾಕಣೆ ಮಾಡುವುದು ಕೂಡ ಕೃಷಿ ಚಟುವಟಿಕೆಯಾಗಿದ್ದು, ಈ ಉದ್ಯೋಗವನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಬಾರದು. ಹೀಗಾಗಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾ ಪಂಗೆ ಅಧಿಕಾರವಿಲ್ಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಹಬ್ಬದ ದಿನ ಯುವಕರ ನಡುವೆ ಗಲಾಟೆ

ಹಬ್ಬದ ದಿನ ಯುವಕರ ನಡುವೆ ಗಲಾಟೆ

September 28, 2023
ಮೂತ್ರ ವಿಸರ್ಜನೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ!

ಮೂತ್ರ ವಿಸರ್ಜನೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ!

September 28, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram