ಚಿಕ್ಕಬಳ್ಳಾಪುರ : ಡಿ.ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸಚಿವರಾಗಿ ನಾವೇ 500 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿಲ್ಲ. ಇನ್ನು ಡಿಕೆಶಿ ಏನ್ ಸ್ಪೆಷಲ್ಲಾ, ಬೇಕಾದ್ರೆ ಕೊರೊನಾ ಮುಗಿದ ಬಳಿಕ ಕೆಪಿಸಿಸಿ ಸ್ಥಾನಕ್ಕೆ ಪದಗ್ರಹಣ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಪದಗ್ರಹಣಕ್ಕೆ ಸರ್ಕಾರ ಅನುಮತಿ ಕೊಡುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರಕ್ಕೂ ಸರ್ಕಾರಕ್ಕೂ ಏನೂ ಸಂಬಂಧ ಇಲ್ಲ. ನಾವೇ ಮಂತ್ರಿಗಳಾಗಿ ಇದುವರೆಗೂ 500 ಜನ ಸೇರಿಸಿ ಒಂದು ಸಭೆ ಮಾಡಲಿಲ್ಲ. ಡಿಕೆಶಿ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿರುವುದನ್ನ ನೋಡಿದ್ದೇನೆ. ಸಾವಿರಾರು ಜನರ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದಾರೆ. ಒಳ್ಳೆಯದೇ ಮಾಡಲಿ, ಬೇಕಾದರೆ ಕೋವಿಡ್ ಸೋಂಕು ಮುಗಿದ ನಂತರ ಮಾಡಿಕೊಳ್ಳಲಿ ಎಂದರು.
ಜುಲೈನಲ್ಲಿ ಕೊರೊನಾ ಹೆಚ್ಚು ಹರಡುವ ಸಾಧ್ಯತೆ
ಜುಲೈ ತಿಂಗಳಲ್ಲಿ ಕೊರೊನಾ ಸೋಂಕು ಅತಿ ಹೆಚ್ಚು ಹರಡುವ ಸಾಧ್ಯತೆ ಇದೆ. ನಿಜವಾದ ಸ್ಪೈಕ್ ಜುಲೈ ನಲ್ಲಿ ಬರುತ್ತೆ ಎಂದು ಪರಿಣಿತರು ಹೇಳಿದ್ದಾರೆ. ವಿದೇಶಗಳಲ್ಲಿ ಒಂದೆರಡು ತಿಂಗಳಲ್ಲೇ ಸ್ಪೈಕ್ ಬಂದಿತ್ತು ಎಂದು ತಿಳಿಸಿದ ಸಚಿವ ಸುಧಾಕರ್, ರಾಜ್ಯದಲ್ಲಿ 70ಕ್ಕೂ ಹೆಚ್ಚು ಲ್ಯಾಬ್ ಗಳನ್ನ ಸ್ಥಾಪಿಸಲಾಗಿದೆ. ನಾಲ್ಕು ಲಕ್ಷ ಕೊರೊನಾ ಟೆಸ್ಟ್ ಗಳನ್ನ ಈಗಾಗಲೇ ಮಾಡಿದ್ದೇವೆ. ಅದೇ ರೀತಿ, 8 ನೇ ತಾರೀಖಿನ ನಂತರ ಲಾಕ್ ಡೌನ್ ಮುಕ್ತ ಮಾಡಿದ್ದೇವೆ. ಆದರೆ, ಲಾಕ್ ಡೌನ್ ಮುಕ್ತ ಮಾಡಿದಾಕ್ಷಣ ಕೊರೊನಾ ಮುಕ್ತ ಆಗುವುದಿಲ್ಲ ಎಂದು ತಿಳಿಸಿದರು.








