ನಿನ್ನ ರೂಮ್ ನಂಬರ್ ಎಷ್ಟು…? ನೀನು ಎಸೆಯುವ ಚೆಂಡನ್ನು ಅಲ್ಲಿಗೆ ಹೊಡೆಯುತ್ತೇನೆ -ಹೀಗೆ ಯಾರು ಯಾರಿಗೆ ಹೇಳಿದ್ದು ?
ಜಾವೆದ್ ಮಿಯಾಂದಾದ್… ಪಾಕ್ ಕ್ರಿಕೆಟ್ ನ ದಿಗ್ಗಜ. ತನ್ನ ಸ್ಪೋಟಕ ಬ್ಯಾಟಿಂಗ್ ನಂತೆ ಜಾವೇದ್ ಮಿಯಾಂದಾದ್ ಕಿರಿ ಕಿರಿ ಮಾಡುವುದರಲ್ಲೂ ಹೆಚ್ಚು ಸುದ್ದಿಯಾಗುತ್ತಿದ್ದರು. ಮೈದಾನದ ಹೊರಗಡೆ ಫ್ರೆಂಡ್ಲಿಯಾಗಿರುವ ಮಿಯಾಂದಾದ್ ಮೈದಾನದಲ್ಲಿ ಮಾತ್ರ ವಿಚಿತ್ರವಾಗಿ ವರ್ತಿಸುತ್ತಿದ್ದರು. ಆದ್ರೆ ಮಿಯಾಂದಾದ್ ಸ್ನೇಹ ಜೀವಿಯಾಗಿದ್ದರು. ಸ್ವಲ್ಪ ಕಿರಿಕಿರಿಯಾಗುತ್ತಿದ್ರೂ ಸದಾ ಮನರಂಜನೆ ನೀಡುತ್ತಿದ್ದರು. ಅದು ಅವರ ಸ್ವಭಾವ. ಅದು ಅವರ ಗೇಮ್ ಪ್ಲಾನ್ ಕೂಡ ಆಗಿತ್ತು.
ಮೈದಾನದಲ್ಲಿ ಎದುರಾಳಿ ಆಟಗಾರರಿಗೆ ಏನಾದ್ರೂ ಹೇಳುತ್ತಾ ಕಿರಿ ಕಿರಿ ಮಾಡುತ್ತಿದ್ದರು. ಅದ್ರಲ್ಲೂ ಅವರು ಬ್ಯಾಟಿಂಗ್ ಮಾಡಲು ಪರದಾಟ ನಡೆಸುತ್ತಿದ್ದಾಗ ಅವರ ಕಿರಿಕಿರಿ ಕೂಡ ಮಿತಿ ಮೀರುತ್ತಿತ್ತು. ಅದನ್ನು ಸಹಿಸಿಕೊಳ್ಳುವುದು ಕೂಡ ಕಷ್ಟಕರವಾಗುತ್ತಿತ್ತು. ಆದ್ರೆ ಅದೆಲ್ಲಾ ಮಿಯಾಂದಾದ್ ಅವರ ತಂತ್ರವಾಗಿತ್ತು. ಎದುರಾಳಿ ಆಟಗಾರರ ಏಕಾಗ್ರತೆಗೆ ಭಂಗವನ್ನುಂಟು ಮಾಡುವುದು ಅವರ ಉದ್ದೇಶವಾಗುತ್ತಿತ್ತು.
ಇದೀಗ ಮುರಳೀ ಕಾರ್ತಿಕ್ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ಸ್ಪಿನ್ನರ್ ದಿಲೀಪ್ ದೋಶಿ ಅವರು ಮಿಯಾಂದಾದ್ ಜೊತೆಗಿನ ಮಾತಿನ ಸಮರದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. 1983ರ ಪಾಕಿಸ್ತಾನ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಅಂದ ಹಾಗೇ ಈ ಘಟನೆಗೆ ಸಾಕ್ಷಿಯಾಗಿರೋದು ಕೂಡ ಬೆಂಗಳೂರು.
ಜಾವೇದ್ ಮಿಯಾಂದಾದ್ ಒಬ್ಬ ಗಲ್ಲಿ ಹೋರಾಟಗಾರ (ಸ್ಟ್ರೀಟ್ ಫೈಟರ್). ಅವರ ಮನೋಭಾವನೇಯೇ ಅಂತಹುದ್ದು. ಇದು ಎಲ್ಲರಿಗೂ ಗೊತ್ತಿದ್ದ ವಿಚಾರವಾಗಿತ್ತು. ಆದ್ರೆ ಆತ ಒಬ್ಬ ಅದ್ಭುತ ಬ್ಯಾಟ್ಸ್ ಮೆನ್. ನಾನು ಬೌಲಿಂಗ್ ಮಾಡಿದ್ದ ಶ್ರೇಷ್ಠ ಕ್ರಿಕೆಟಿಗರಲ್ಲಿ ಆತನೂ ಒಬ್ಬ. ಒಬ್ಬ ಎದುರಾಳಿಯಾಗಿ ಆತನನ್ನು ನಾನು ತುಂಬಾ ಗೌರವಿಸುತ್ತಿದ್ದೆ. ಹಾಗೇ ಉತ್ತಮ ಸ್ನೇಹಿತ ಕೂಡ. ಮೈದಾನದ ಹೊರಗಡ ಆತನನ್ನು ನಾನು ತುಂಬಾ ಇಷ್ಟಪಡುತ್ತಿದ್ದೆ. ಆದ್ರೆ ಮೈದಾನದಲ್ಲಿ ಮಾತ್ರ ಆತನ ವರ್ತನೆಯೇ ವಿಚಿತ್ರವಾಗಿರುತ್ತಿತ್ತು ಎಂದು ದಿಲೀಪ್ ದೋಶಿ ಹೇಳಿದ್ದಾರೆ.
ಮೈದಾನದಲ್ಲಿ ಆತನನ್ನು ನೀವು ಕಟ್ಟಿ ಹಾಕಿದಾಗ ಆತ ತುಂಬಾ ತಳಮಳಗೊಳ್ಳುತ್ತಿದ್ದ. ಆಗ ಆತ ನಿಮ್ಮ ಏಕಾಗ್ರತೆಗೆ ಭಂಗ ತರಲು ಪ್ರಯತ್ನ ನಡೆಸುತ್ತಿದ್ದ. ತುಂಬಾನೇ ಕಿರಿಕಿರಿಯನ್ನುಂಟು ಮಾಡುತ್ತಿದ್ದ. ಅದರಲ್ಲಿ ಆತ ನಿಸ್ಸೀಮ. ಆಗಲೇ ಕಿರಣ್ ಮೋರೆ, ಡೆನ್ನಿಸ್ ಲಿಲ್ಲಿ, ನಾನು ಸೇರಿದಂತೆ ಅನೇಕರ ಜೊತೆ ಕಿರಿಕಿರಿ ಮಾಡಿಕೊಂಡಿದ್ದ. ಫೀಲ್ಡರ್ಗಳ ಜೊತೆಗೆ ಅಥವಾ ಬೌಲಿಂಗ್ ಮಾಡುತ್ತಿರುವಾಗ ಆ ಕಡೆ ಈ ಕಡೆ ಓಡಾಡುತ್ತಾ ಏನೇನೋ ಹೇಳುತ್ತಿದ್ದ. ಅಂತಹುದ್ದೇ ಘಟನೆ ಬೆಂಗಳೂರಿನಲ್ಲಿ 1983ರ ಟೆಸ್ಟ್ ಪಂದ್ಯದ ವೇಳೆ ಒಂದು ಘಟನೆ ನಡೆದಿತ್ತು ಅಂತ ದಿಲೀಪ್ ದೋಶಿ ನೆನಪು ಮಾಡಿಕೊಂಡಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದಲ್ಲೂ ಆತ ಕಿರಿಕಿರಿ ಮಾಡುತ್ತಿದ್ದ. ಆತ ನನಗೆ ಏನೇನೂ ಹೇಳುತ್ತಿದ್ದ. ನಿನ್ನ ರೂಮ್ ನಂಬರ್ ಎಷ್ಟು ? ನೀನು ಎಸೆಯುವ ಚೆಂಡನ್ನು ಅಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದ. ಇದು ಮುಗಿದು ಹೋದ ಅಧ್ಯಾಯ. ಇದನ್ನು ತುಂಬಾನೇ ರಸವತ್ತಾಗಿ ಎಲ್ಲಾ ಹೇಳಿದ್ದಾರೆ ಎಂದು ದಿಲೀಪ್ ದೋಶಿ ಹೇಳಿದ್ದಾರೆ.
ಆಗ ಮುರಳಿ ಕಾರ್ತಿಕ್, ಮಿಯಾಂದಾದ್ ಹೇಳಿದಂತೆ ಮಾಡಿದ್ರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ್ದ ದಿಲೀಪ್ ದೋಶಿ , ಆತ ಬ್ಯಾಟಿಂಗ್ ಮಾಡಲು ಒದ್ದಾಡುತ್ತಿದ್ದ. ನನ್ನ ಎಸೆತಕ್ಕೆ ಹೊಡೆಯಲು ಅವನಿಂದ ಸಾಧ್ಯವಾಗಿಲ್ಲ. 98 ರನ್ ಗಳಿಸಿ ಆತ ಔಟಾಗಿದ್ದ ಎಂದು ದಿಲೀಪ್ ತಿಳಿಸಿದ್ದಾರೆ. ಸೌರಾಷ್ಟ್ರದ ದಿಲೀಪ್ ದೋಶಿ 33 ಟೆಸ್ಟ್ ಪಂದ್ಯ, 15 ಏಕದಿನ ಪಂದ್ಯ ಹಾಗೂ 238 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿದ್ದರು.