15ರ ಹರೆಯದ ಬಾಲಕನಿಗೆ ನಾವು ಬೌಲಿಂಗ್ ಮಾಡಬೇಕಾ..? ಈ ಪ್ರಶ್ನೆಗೆ ಉತ್ತರವೂ ಅಲ್ಲೇ ಸಿಕ್ಕಿತ್ತಂತೆ..!
ವಿಶ್ವ ಕ್ರಿಕೆಟ್ ನಲ್ಲಿ ಸಚಿನ್ ತೆಂಡುಲ್ಕರ್‍ಗಿಂತ ದೊಡ್ಡ ಹೆಸರು ಮತ್ತೊಂದಿಲ್ಲ. ತನ್ನ 16ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್
ಗೆ ಪದಾರ್ಪಣೆ ಮಾಡಿದ್ದ ಸಚಿನ್ ನಂತರ ಸುಮರು 24 ವರ್ಷಗಳ ಕಾಲ ವಿಶ್ವ ಕ್ರಿಕೆಟ್ ನಲ್ಲಿ ರಾರಾಜಿಸಿದ್ದರು. ಶಾಲಾ ಟೂರ್ನಿಯೊಂದರಲ್ಲಿ ವಿನೋದ್ ಕಾಂಬ್ಲಿ ಜೊತೆ ಅಮೋಘ ಆಟವಾಡಿದ್ದ ಸಚಿನ್ ಮುಂಬೈ ಕ್ರಿಕೆಟ್‍ನಲ್ಲಿ ಆಗಲೇ ದೊಡ್ಡ ಸುದ್ದಿ ಮಾಡಿದ್ದರು.
ಆದ್ರೆ ಸಚಿನ್ ತೆಂಡುಲ್ಕರ್ ತನ್ನ 15ರ ಹರೆಯದಲ್ಲೇ ಮುಂಬೈ ತಂಡಕ್ಕೆ ಸೇರ್ಪಡೆಯಾದ್ರು. ಮುಂಬೈ ರಣಜಿ ತಂಡದ ಆಯ್ಕೆಗಾರರು ಸಚಿನ್ ಮೇಲೆ ಆಗಲೇ ಒಂದು ಕಣ್ಣಿಟ್ಟಿದ್ದರು. ಆದ್ರೆ ಚಿಕ್ಕ ಹುಡುಗ. ಎಲ್ಲಿ ಗಾಯವಾಗುತ್ತಾ ಅಂತ ಸುಮ್ಮನಾಗಿದ್ದರು. ಆದ್ರೆ ಅಂದು ಅವರೊಬ್ಬರ ಮಾತನ್ನು ಮುಂಬೈ ರಣಜಿ ತಂಡದ ಆಯ್ಕೆ ಸಮಿತಿಗೆ ದಿಕ್ಕರಿಸಲು ಸಾಧ್ಯವಾಗಿಲ್ಲ. ಅವರ ಮಾತಿನಂತೆ ಸಚಿನ್ ತೆಂಡುಲ್ಕರ್ ಮುಂಬೈ ರಣಜಿ ತಂಡದ 15 ಸದಸ್ಯರಲ್ಲಿ ಒಬ್ಬರಾಗಿದ್ದರು. ನಂತರ ನಡೆದದ್ದು ಇತಿಹಾಸ. ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ಟೂರ್ನಿಗಳ ಶತಕ ಸಿಡಿಸಿ ಟೀಮ್ ಇಂಡಿಯಾಗೂ ಆಯ್ಕೆಯಾದ್ರು, ಬಳಿಕ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಹಾಗಿದ್ರೆ ಸಚಿನ್ ತೆಂಡುಲ್ಕರ್ ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾಗಲು ಯಾರು ಕಾರಣ.. ಉತ್ತರ ಸಿಂಪಲ್. ದಿಲೀಪ್ ವೆಂಗ್‍ಸರ್ಕಾರ್. ಈ ವಿಷ್ಯವನ್ನು ಬಹಿರಂಗಗೊಳಿಸಿದ್ದು ಕೂಡ ಸ್ವತಃ ದಿಲೀಪ್ ವೆಂಗ್‍ಸರ್ಕರ್ ಅವರೇ. ಸಚಿನ್ ತೆಂಡುಲ್ಕರ್ ಅವರನ್ನು ಯಾವಾಗ ಮೊದಲ ಬಾರಿ ಭೇಟಿಯಾಗಿದ್ದು, ಆ ನಂತರ ಏನೆಲ್ಲಾ ಆಯ್ತು ಎಂಬುದನ್ನು ವೆಂಗ್‍ಸರ್ಕರ್ ಹೇಳಿಕೊಂಡಿದ್ದಾರೆ.
ನಾನು ಸಚಿನ್ ತೆಂಡುಲ್ಕರ್ ಅವರ ಹೆಸರನ್ನು ಕೇಳಿದ್ದೆ. ಶಾಲಾ ಕ್ರಿಕೆಟ್ ಟೂರ್ನಿಗಳಲ್ಲಿ ಬೃಹತ್ ಮೊತ್ತದ ರನ್ ದಾಖಲಿಸಿದ್ದಾಗ. ಈ ಟೂರ್ನಿಗೆ ಸುಮಾರು 100 ವರ್ಷಗಳ ಇತಿಹಾಸವಿದೆ. ಅನೇಕ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಆಡಿ ದೇಶ, ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿ ರೂಪುಗೊಂಡಿದ್ದಾರೆ ಎಂದು ಹೇಳ್ತಾರೆ ದುಲೀಪ್ ವೆಂಗ್‍ಸರ್ಕರ್.
ನಾನು ಆಗ ಭಾರತ ತಂಡದ ನಾಯಕನಾಗಿದ್ದೆ. ನಾವು ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಬೇಕಿತ್ತು. ಅದೂ ಅಲ್ಲದೆ ಅದು ನನ್ನ ನೂರನೇ ಟೆಸ್ಟ್ ಪಂದ್ಯ. ಹೀಗಾಗಿ ನಾವು ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದೇವು. ನಮ್ಮ ಕೋಚ್ ವಾಸುದೇವ್ ಪರಂಪಜೆ ಅವರು ಸಚಿನ್ ಆಟ ನೋಡಿ ಸಾಕಷ್ಟು ಪ್ರಭಾವಿತರಾಗಿದ್ದರು. ಆಗ ಅವರು ನನ್ನ ಬಳಿ ಸಚಿನ್ ಬಗ್ಗೆ ಹೇಳಿದ್ದರು. ಈ ಹುಡುಗನನ್ನು ನೋಡು. ಅದ್ಭುತ ಪ್ರತಿಭಾವಂತ ಅಂದ್ರು. ಅದಕ್ಕೆ ನಾನು, ಆ ಹುಡುಗನನ್ನು ನಾನು ಆಮೇಲೆ ನೋಡುತ್ತೇನೆ. ಈಗ ಅಲ್ಲ ಅಂದೆ. ಆದ್ರೆ ಅವರು ಪಟ್ಟುಬಿಡಲಿಲ್ಲ. ಸಚಿನ್‍ರನ್ನು ಅವರು ಮೈದಾನಕ್ಕೆ ಕರೆದುಕೊಂಡು ಬಂದ್ರು. ಆಗ ನಾನು ಆತ ನೆಟ್ಸ್ ನಲ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡ್ತಾ ಇದ್ದೆ. ಆಮೇಲೆ ಕಪಿಲ್ ದೇವ್, ಆರ್ಶಾದ್ ಆಯೂಬ್, ಮಣಿಂದರ್ ಸಿಂಗ್ ಮತ್ತು ಚೇತನ್ ಶರ್ಮಾ ಅವರಲ್ಲಿ ಸಚಿನ್‍ಗೆ ಬೌಲಿಂಗ್ ಮಾಡುವಂತೆ ಹೇಳಿದ್ದೆ. ಅದಕ್ಕೆ ಅವರು, ಇದೇನು ನಡೀತಾ ಇದೆ. 15ರ ಹರೆಯದ ಹುಡುಗನಿಗೆ ನಾವು ಯಾಕೆ ಬೌಲಿಂಗ್ ಮಾಡಬೇಕು ಎಂದಿದ್ದರು ಅಂತಾರೆ ದಿಲೀಪ್ ವೆಂಗ್‍ಸರ್ಕರ್.
ನಂತರ ನಾನು ಅವರಲ್ಲಿ ಹೇಳಿದ್ದೆ. ಈ ಹುಡುಗ ಶಾಲಾ ಕ್ರಿಕೆಟ್ ಟೂರ್ನಿಗಳಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿ ರನ್
ಗಳಿಸಿದ್ದಾನೆ. ನಾವು ನೋಡೋಣ, ಆತ ಹೇಗೆ ಬ್ಯಾಟಿಂಗ್ ಮಾಡ್ತಾನೆ ಅಂತ. ಅದಕ್ಕೆ ಅವರು ಒಪ್ಪಿಕೊಂಡ್ರು. ಯಾಕಂದ್ರೆ ಅವರೆಲ್ಲಾ ಆಗಲೇ ದೊಡ್ಡ ಹೆಸರು ಮಾಡಿದ್ದರು. ಆದ್ರೆ ಅವರ ಬೌಲಿಂಗ್ ನಲ್ಲಿ ಸಚಿನ್ ಅದ್ಭುತವಾಗಿ ಆಡಿ ಗಮನ ಸೆಳೆದಿದ್ದರು ಎಂದು ವೆಂಗ್‍ಸರ್ಕಾರ್ ನೆನಪು ಮಾಡಿಕೊಳ್ಳುತ್ತಾರೆ.
ಇನ್ನು ಅದೇ ದಿನ ಸಂಜೆ ಮುಂಬೈ ರಣಜಿ ತಂಡದ ಆಯ್ಕೆ ನಡೆಯುತ್ತಿತ್ತು. ಆಯ್ಕೆ ಸಮಿತಿ ಸಭೆಗೆ ನಾನು ಹೋಗಿದ್ದೆ. ನಾನು ಸಚಿನ್ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ನಾನು ಆತನ ಬ್ಯಾಟಿಂಗ್ ಅನ್ನು ನೋಡಿದ್ದೇನೆ. ಚೆನ್ನಾಗಿ ಬ್ಯಾಟಿಂಗ್ ಮಾಡ್ತಾನೆ. 15 ಸದಸ್ಯರ ತಂಡದಲ್ಲಿ ಆತನಿಗೆ ಸ್ಥಾನ ನೀಡಿ ಎಂದು ಹೇಳಿದ್ದೆ. ಅದಕ್ಕೆ ಅವರು ಈಗ ಬೇಡ. ಆತ ಇನ್ನೂ ಚಿಕ್ಕ ಹುಡುಗ. ಗಾಯಗೊಂಡ್ರೆ ನಾವೇ ಉತ್ತರ ನೀಡಬೇಕಾಗುತ್ತದೆ. ಹೀಗಾಗಿ ಕಾದು ನೋಡೋಣ ಅಂದಿದ್ರು. ಆದ್ರೆ ನಾನು 15 ಸದಸ್ಯರ ತಂಡದಲ್ಲಿ ಅವಕಾಶ ನೀಡಿ. ಅವನಿಗೂ ಕಲಿಯೋಕೆ ಆಗುತ್ತೆ ಎಂದು ಹೇಳಿದ್ರಂತೆ ದಿಲೀಪ್ ವೆಂಗ್‍ಸರ್ಕರ್,
ಆದ್ರೆ ತೆಂಡುಲ್ಕರ್ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ್ರು. ನೋಡ ನೋಡುತ್ತಲೇ ವಿಶ್ವಕ್ರಿಕೆಟ್ ನಲ್ಲಿ ಅದ್ಭುತ ಸಾಧನೆಯನ್ನೇ ಮಾಡಿದ್ರು. 1989ರಿಂದ 2013ರವರೆಗೆ ಸಚಿನ್ ಹೆಸರು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ನಲಿದಾಡುತ್ತಿದೆ. ಈಗಲೂ ಆ ಹೆಸರಿನಲ್ಲಿ ಒಂಥರಾ ಮಾಂತ್ರಿಕತೆ. ಒಟ್ಟಿನಲ್ಲಿ ಸಚಿನ್ ಆಯ್ಕೆಯನ್ನು ಮಾಡಿದ್ದು ವೆಂಗ್‍ಸರ್ಕರ್, ವಿರಾಟ್ ಕೊಹ್ಲಿಯ ಆಯ್ಕೆಯನ್ನು ಮಾಡಿದ್ದು ವೆಂಗ್‍ಸರ್ಕರ್.








