ಇಂಫಾಲ: ಸಂಘರ್ಷಕ್ಕೆ ಕಾರಣವಾಗುತ್ತಿರುವ ಮಣಿಪುರದಲ್ಲಿ (Manipura) ಬಿರೇನ್ ಸಿಂಗ್ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಸಂಕಷ್ಟ ಶುರುವಾಗಿದೆ. ಅಲ್ಲಿನ ಸರ್ಕಾರ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಸ್ವಪಕ್ಷದಲ್ಲೇ ಕೇಳಿ ಬಂದಿದೆ. ಹೀಗಾಗಿ ಸಿಎಂ ಬಿರೇನ್ ಸಿಂಗ್ (Biren Singh) ಅವರ ವಿರುದ್ಧವೇ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.
ಹೀಗಾಗಿ ಎನ್ ಡಿಎಗೆ ನೀಡಿದ್ದ ಬೆಂಬಲವನ್ನು ಎನ್ಪಿಪಿ (NPP) ಹಿಂಪಡೆದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲು ಸಿಎಂ ಬಿರೇನ್ ಸಿಂಗ್ ಎನ್ ಡಿಎ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಈ ಸಭೆಗೆ 27 ಶಾಸಕರು ಹಾಜರಾಗಿದ್ದು, ಬರೋಬ್ಬರಿ 19 ಜನ ಶಾಸಕರು ಗೈರಾಗಿದ್ದಾರೆ. ಈ ಪೈಕಿ ಬಿಜೆಪಿಯ 17 ಜನ ಶಾಸಕರು ಗೈರಾಗಿದ್ದಾರೆ.
19ರಲ್ಲಿ 7 ಶಾಸಕರು ವೈದ್ಯಕೀಯ ಕಾರಣ ಹೇಳಿ ಗೈರು ಹಾಜರಾದರೆ ಉಳಿದ 12 ಜನ ಹೇಳದೇ ಕೇಳದೇ ಗೈರು ಹಾಜರಾಗಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ 7 ಜನ ಶಾಸಕರು ಮಣಿಪುರವನ್ನೇ ತೊರೆದಿದ್ದಾರೆ. ಆದರೆ, ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಹೀಗಾಗಿ ಅಲ್ಲಿನ ಸರ್ಕಾರ ಉಳಿಯುತ್ತಾ? ಎಂಬ ಚರ್ಚೆಗಳು ಶುರುವಾಗಿವೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಮಣಿಪುರ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸಿಎಂ ಕಾರ್ಯ ವೈಖರಿಗೆ ಕುಕಿ ಬುಡಕಟ್ಟು ಸಮುದಾಯದ 10 ಜನ ಬಿಜೆಪಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.