ಬೆಂಗಳೂರು: ರಾಜ್ಯದಲ್ಲಿ ವಿಪಕ್ಷಗಳು ಸಿಎಂ ಸ್ಥಾನ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ಮಧ್ಯೆ ಹಲವು ನಾಯಕರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷರು (AICC President) ಸೇರಿದಂತೆ ಹೈಕಮಾಂಡ್ ಗರಂ ಆಗಿದೆ ಎನ್ನಲಾಗಿದೆ.
ಪಕ್ಷದ ಶಿಸ್ತು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ಸುರ್ಜೆವಾಲಾ ಅವರಿಗೆ ಎಐಸಿಸಿ ಅಧ್ಯಕ್ಷರ ಸೂಚನೆ ನೀಡಿದ್ದಾರೆ. ಶಿಸ್ತು ಉಲ್ಲಂಘಿಸಿದರೆ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಸೂಚಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತಮಾಡಿದ ಅವರು, ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ. ನನ್ನ ಮತ್ತು ಶಿವಕುಮಾರ್ ಇಬ್ಬರೊಟ್ಟಿಗೂ ಕೆ.ಸಿ ವೇಣುಗೋಪಾಲ್ (KC Venugopal) ಮಾತನಾಡಿದ್ದಾರೆ. ಇನ್ನು ಮುಂದೆ ಸಭೆ ಸೇರುವುದು, ಮಾತನಾಡುವುದು, ಮಾಡಬಾರದು. ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಅದಕ್ಕೆ ಸಂಬಂಧಪಟ್ಟವರೇ ಜವಾಬ್ದಾರರಾಗುತ್ತಾರೆ ಎಂದಿದ್ದಾರೆ.
ಯಾವ ಸಚಿವರು ಸಭೆ ಮಾಡ್ತಾರೆ? ಬಹಿರಂಗವಾಗಿ ಮಾತಾಡ್ತಾರೆ ಅವರಿಗೆ ಎಐಸಿಸಿಯಿಂದ ನೀವೆ ನೋಟಿಸ್ ನೀಡಿ. ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೆ ಸಚಿವ ಸ್ಥಾನದಿಂದ ವಜಾ ಮಾಡಿ. ಇವಿಷ್ಟು ನಿರ್ದೇಶನ ಎಐಸಿಸಿ ಅಧ್ಯಕ್ಷರಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ಬಂದಿದೆ. ಕೆ.ಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲ ಇಬ್ಬರೂ ನನ್ನ ಗಮನಕ್ಕೆ ತಂದಿದ್ದಾರೆ. ನಿಮ್ಮ ಸಭೆ, ನಿಮ್ಮ ಮಾತು, ನಿಮ್ಮ ಜವಬ್ದಾರಿ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.
ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅವರ ಹೇಳಿಕೆ ಬಗ್ಗೆ ಅವರ ಮಗ ಶಾಸಕ ಪ್ರಕಾಶ್ ಕೋಳಿವಾಡ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.