ಮಡಿಕೇರಿ: ವನ್ಯ ಪ್ರಾಣಿಗಳ ಹಾವಳಿ ತಡೆ ನಿಯಂತ್ರಣ, ಮಲೆನಾಡು ಪ್ರದೇಶದಲ್ಲಿ ಕಗ್ಗಂಟಾಗಿರುವ ಕಸ್ತೂರಿ ರಂಗನ್ ವರದಿ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಳ ಆಗ್ರಹಿಸಿ ಮೂರು ಜಿಲ್ಲೆಗಳ ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆಗೆ ನಿರ್ಧರಿಸಲಾಗಿದೆ.
ಕಾಫಿ ಮತ್ತು ಇತರೆ ಬೆಳೆಗಳಿಗೆ ಬಳಸಲಾಗುವ 10 ಹೆಚ್.ಪಿವರೆಗಿನ ಪಂಪ್‍ಸೆಟ್ ಗಳಿಗೆ ಉಚಿತ ವಿದ್ಯುತ್, ಸಾಲ ಮನ್ನಾ, ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಕೊಡಗು, ಚಿಕ್ಕಮಗಳೂರು ಹಾಗು ಹಾಸನ ಜಿಲ್ಲಾ ಬೆಳೆಗಾರರ ಒಕ್ಕೂಟ ಸದ್ಯದಲ್ಲೇ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿ ಎದುರು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ಬೆಳೆಗಾರರ ಒಕ್ಕೂಟ ನಿರ್ಧರಿಸಿದೆ.

ಮಲೆನಾಡಿನ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕಾಡಾನೆ, ಕಾಡೆಮ್ಮೆ, ಹುಲಿ, ಮಂಗ, ಕಾಡುಹಂದಿ ಸೇರಿದಂತೆ ವಿವಿಧ ವನ್ಯಜೀವಿಗಳ ದಾಂಧಲೆಯ ಪ್ರಕರಣ ಹೆಚ್ಚುತ್ತಲೇ ಇದೆ. ಹೀಗಿದ್ದರೂ ಇದಕ್ಕೆ ಶಾಶ್ವತ ಕಡಿವಾಣ ಹಾಕುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಅರಣ್ಯ ಸಚಿವರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಬಗ್ಗೆ ಬೆಂಗಳೂರಿನ ಅರಣ್ಯ ಭವನದ ಮುಂದೆಯೂ ಪ್ರತಿಭಟನೆಗೆ ತೀಮಾ೯ನಿಸಲಾಗಿದೆ.

ಕರ್ನಾಟಕ ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ರೈತ ಉತ್ಪಾದಕ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಬೇಕು. ಕಸ್ತೂರಿರಂಗನ್ ವರದಿ ಸಂಬಂಧಿತ ಇರುವ ಗೊಂದಲ ಬಗೆಹರಿಸಿ, ಜನರಿಗೆ ಸಮಸ್ಯೆಯಾಗದಂತೆ ವರದಿ ಜಾರಿಗೆ ತರಬೇಕು. ಕಾಫಿ ಮಂಡಳಿಯ ನೂತನ ಪಂಚ ವಾರ್ಷಿಕ ಯೋಜನೆಯಲ್ಲಿ ಕಾಫಿಗೆ ಮತ್ತಷ್ಟು ಸಹಾಯಧನ ನೀಡಬೇಕೆಂದು ಒಕ್ಕೂಟ ನಿರ್ಧರಿಸಿದೆ.

ಕೊಡಗು ಜಿಲ್ಲೆಯಲ್ಲಿ ಸತತವಾದ ಪ್ರಾಕೃತಿಕ ವಿಕೋಪದಿಂದಾಗಿ ಸಂಕಷ್ಟದಲ್ಲಿದ್ದ ಬೆಳೆಗಾರರಿಗೆ ಕೋವಿಡ್ ಸಂಕಷ್ಟವೂ ಸಾಕಷ್ಟು ಹಾನಿಯುಂಟು ಮಾಡಿದೆ. ಬಫರ್ ಜೋನ್ ಅಂಶ ಜಾರಿಯಾದಲ್ಲಿ ಕೊಡಗಿನಲ್ಲಿ ಯಾವ ಬೆಳೆಗಾರನೂ ಕಾಫಿ ಸಂಸ್ಕರಣೆ ಮಾಡಲು ಸಾಧ್ಯವೇ ಇಲ್ಲದಂಥ ದುಸ್ಥಿತಿ ತಲೆದೋರಲಿದೆ.
ಕೇರಳ ರಾಜ್ಯದಲ್ಲಿ ಕಸ್ತೂರಿರಂಗನ್ ವರದಿ ಸಂಬಂಧಿತ ಪ್ರತಿ ಪಂಚಾಯತ್ ಮಟ್ಟದಲ್ಲಿಯೂ ಸಮೀಕ್ಷೆ ನಡೆಸಿ ಸಾಧಕ, ಬಾಧಕದ ಮಾಹಿತಿಯ ಸಮಗ್ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿವೆ. ಇದೀಗ ವರದಿ ಜಾರಿಯಾದರೆ ಖಂಡಿತವಾಗಿಯೂ ಕಷ್ಟಕರ ಪರಿಸ್ಥಿತಿ ತಲೆದೋರುವಲ್ಲಿ ಕಾರಣವಾಗಲಿದೆ.
ಪಶ್ಚಿಮಘಟ್ಟ ಶ್ರೇಣಿಯ ಕ್ಷೇತ್ರಗಳ ಸಂಸದರನ್ನು ಒಟ್ಟುಗೂಡಿಸಿ ಕಸ್ತೂರಿರಂಗನ್ ವರದಿ ಜಾರಿ ಸಂಬಂಧಿತ ವಿಶೇಷ ಸಭೆಯನ್ನು ಆಯೋಜಿಸುವ ಚಿಂತನೆಯನ್ನು ಕರ್ನಾಟಕ ಬೆಳಗಾರರ ಒಕ್ಕೂಟ ಚಿಂತನೆ ನಡೆಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








