ಬಾಗಲಕೋಟೆ: ವಕ್ಫ್ ಬೋರ್ಡ್ (Waqf Board) ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ಭಿನ್ನಮತ ಸ್ಫೋಟಗೊಂಡ ಘಟನೆ ನಡೆಯಿತು.
ಕರ್ನಾಟಕ ಬಿಜೆಪಿ ರಾಜ್ಯವ್ಯಾಪಿ ವಕ್ಫ್ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಗೆ ಆಗಮಿಸಿದ ಹಾಲಿ ಎಂಎಲ್‌ಸಿ ಪಿಹೆಚ್ ಪೂಜಾರ (MLC PH Pujar), ಮಾಜಿ ಎಂಎಲ್ ಎ ವೀರಣ್ಣ ಚರಂತಿಮಠ (Veeranna Charantimath) ಬೆಂಬಲಿಗರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ.
ಪಿಹೆಚ್ ಪೂಜಾರ ಬೆಂಬಲಿಗರು ಬಂದರೆ ನಾವು ಪ್ರತಿಭಟನೆಗೆ ಬರುವುದಿಲ್ಲ ಎಂದು ವೀರಣ್ಣ ಚರಂತಿಮಠ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ನಾವು ಬಂದೇ ಬರುತ್ತೇವೆ ಎಂದು ಹಾಲಿ ಪರಿಷತ್ ಸದಸ್ಯ ಪಿ ಹೆಚ್ ಪೂಜಾರ ಬೆಂಬಲಿಗರು ಪಟ್ಟ ಹಿಡಿದರು.
ಎರಡು ಬಣಗಳ ನಡುವಿನ ತಿಕ್ಕಾಟ ಜೋರಾಗುತ್ತಿದ್ದಂತೆ ಗೊಂದಲ ಸರಿಪಡಿಸಲು ಬಿಜೆಪಿ ಮುಖಂಡರ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಆದರೂ ಫಲ ನೀಡಲಿಲ್ಲ. ಆನಂತರ ಚರಂತಿಮಠ ಬೆಂಬಲಿಗರು ಪ್ರತಿಭಟನೆ ನಡೆಸಿದರೆ, ಪೂಜಾರ ಬೆಂಬಲಿಗರು ಕಚೇರಿಯಲ್ಲಿ ಉಳಿದರು. ಈ ನಡುವೆ ಗೊಂದಲದ ವಾತಾವರಣ ನಿರ್ಮಾಣವಾಯಿತು.








