ಸಂಪುಟ ರಚನೆ : ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂತ್ರಿ ಮಂಡಲ ರಚನೆಯಾಗಿದ್ದು, ರಾಜಭವನದಲ್ಲಿ 19 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜೊತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಪ್ರಮಾಣವಚನ ಸ್ವೀಕರಿಸಬೇಕಿತ್ತಂತೆ.
ಈ ಮಧ್ಯೆ ಕೊನೆ ಕ್ಷಣದವರೆಗೆ ಮಂತ್ರಿ ಆಗುವವರ ಲಿಸ್ಟ್ ನಲ್ಲಿ ಹೆಸರಿದ್ದು, ಕೊನೆಯಲ್ಲಿ ಕೈ ಬಿಟ್ಟಿರುವುದಕ್ಕೆ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿವಾಹಿನಿ ಜೊತೆ ಮಾತನಾಡಿದ ಪೂರ್ಣಿಮಾ ಶ್ರೀನಿವಾಸ್, ಭ್ರಷ್ಟಾಚಾರದ ಆರೋಪ ಕೇಳಿಬಂದಿರುವ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನ ನೀಡಿರುವುದು ಬೇಸರವಾಗಿದೆ.
ನನಗೆ ಅಲ್ಲದೆ ಬೇರೆ ಮಹಿಳಾ ಶಾಸಕರನ್ನು ಮಂತ್ರಿ ಮಾಡಿದ್ದರೂ ಕೂಡ ಬೇಸರ ಆಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಕೇವಲ ಪೂರ್ಣಿಮಾ ಶ್ರೀನಿವಾಸ್ ಮಾತ್ರವಲ್ಲದೆ ಇನ್ನೂ ಹಲವರು ಸಚಿವ ಸಂಪುಟ ರಚನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.









