ಅಜ್ಞಾತ ಸ್ಥಳದಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ದಿವ್ಯಾ ಹಾಗರಗಿ
ಕಲಬುರಗಿ: PSI ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಿ ದಿವ್ಯಾ ಹಾಗರಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅಜ್ಞಾತಸ್ಥಳದಿಂದಲೇ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಸಿಐಡಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದಿವ್ಯಾ ಹಾಗರಗಿ ಒಂದು ವಾರವಾದರೂ ವಿಚಾರಣೆಗೆ ಹಾಜರಾಗಿಲ್ಲ. ಮನೆ ಮೇಲೆ ದಾಳಿ ಮಾಡಿ ದಿವ್ಯಾ ಅವರ ಪತಿ ರಾಜೇಶನನ್ನು ಬಂಧಿಸಿದರೂ ಇಲ್ಲಿಯವರೆಗೆ ದಿವ್ಯಾ ಪತ್ತೆಯಾಗಿಲ್ಲ.
ದಿವ್ಯಾ ಹಾಗರಗಿ ವಕೀಲರ ಮೂಲಕ ಕಲಬುರಗಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ ದಿವ್ಯಾ ಹಾಗರಗಿ ಅಲ್ಲದೆ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್, ಸಹ ಶಿಕ್ಷಕಿ ಅಶ್ವಿನಿ ಕೂಡಾ ಸಿಐಡಿ ಕೈಗೆ ಸಿಗದೆ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹಾಗೇ ಸಿಐಡಿಯಿಂದ ಈಗಾಗಲೇ ಬಂಧನಕ್ಕೊಳಗಾಗಿರುವ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷಾ ಮೇಲ್ವಿಚಾರಕರೂ ಸಹ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.