ಬೆಂಗಳೂರು : ನಗರದ ಡಿಜೆಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಆಗ್ರಹಿಸಿದ್ದಾರೆ.
ಡಿ ಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಎಂ ಇಬ್ರಾಹಿಂ ಅವರು ಇಂದು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ದುರದೃಷ್ಟಕರ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಒಳ್ಳೆಯವರು. ಅವರ ಮನೆಯ ಮೇಲೆ ಏಕೆ ದಾಳಿ ಆಗಿದೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ಜಾತಿ ಗಲಭೆ ಅಲ್ಲ. ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿದವರ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದರೆ ಗಲಭೆ ಜೋರಾಗುತ್ತಿರಲಿಲ್ಲ. ಪೋಲೀಸರು ವಿಳಂಬ ನೀತಿ ತೋರುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಗಲಭೆ ನಡೆಸುವುದು ಸರಿಯಲ್ಲ ಎಂದ ಇಬ್ರಾಹಿಂ, ಈಗ ಗಲಭೆ ನಡೆದ ಕಡೆ ಕರ್ಫ್ಯೂ ತೆಗೆಯಲಾಗಿದೆ. 144 ಸೆಕ್ಷನ್ ಮಾತ್ರ ಜಾರಿ ಜಾರಿಯಲ್ಲಿದೆ. ಅಂಗಡಿಗಳನ್ನ ತೆರೆಯಲು ಅವಕಾಶವಿದೆ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಇದೇ ಆಗಸ್ಟ್ 20 ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರನ್ನು ಅಲ್ಪಸಂಖ್ಯಾತ ನಾಯಕರು ಭೇಟಿ ಮಾಡಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಗಲಭೆಯಲ್ಲಿ ಸಾವನ್ನಪ್ಪಿದವರಿಗೆ ಶಾಸಕ ಜಮೀರ್ ಪರಿಹಾರ ನೀಡಲು ಮುಂದಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಉಳ್ಳವರು ಶಿವಾಲಯವ ಮಾಡುವರು. ನಾನು ಬಡವ ನಾನೇನು ಮಾಡಲಯ್ಯ. ನನ್ನ ಕಾಲೆ ಕಂಬ, ದೇಹವೆ ದೇಗುಲ, ಶಿರಹೊನ್ನ ಕಳಶವಯ್ಯ ಎಂದು ವಚನ ಹೇಳಿದರು.








