ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಠಾಧೀಶರ ಮಧ್ಯಪ್ರವೇಶದ ವಿಚಾರ ಈಗ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಜಿದ್ದಾಜಿದ್ದಿನ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ತಮ್ಮ ಪರವಾಗಿ ಧ್ವನಿ ಎತ್ತಿದ ಒಕ್ಕಲಿಗ ಸ್ವಾಮೀಜಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಯವರಿಗೆ ಡಿ ಕೆ ಶಿವಕುಮಾರ್ ಇತಿಹಾಸದ ಪುಟಗಳನ್ನು ತಿರುವಿ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.
ಒಕ್ಕಲಿಗರ ಎರಡನೇ ಮಠ ಹೇಗೆ ಸ್ಥಾಪನೆಯಾಯಿತು? ಅಂದು ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡದಿದ್ದರೆ ಎಚ್ ಡಿ ದೇವೇಗೌಡರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತೇ ಎಂದು ಡಿ ಕೆ ಶಿವಕುಮಾರ್ ಅವರು ಕುಮಾರಸ್ವಾಮಿಯವರಿಗೆ ನೇರ ಪ್ರಶ್ನೆ ಹಾಕುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಅಂದು ಸ್ವಾಮೀಜಿಗಳು ಬೀದಿಗಿಳಿದಿರಲಿಲ್ಲವೇ?
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕುಮಾರಸ್ವಾಮಿಯವರ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಪಾಪ, ಕುಮಾರಣ್ಣನಿಗೆ ಇತಿಹಾಸ ಮರೆತುಹೋದಂತಿದೆ. ಒಕ್ಕಲಿಗರ ಎರಡನೇ ಮಠ ಹೇಗೆ ಆಯಿತು? ಅದನ್ನು ಕಟ್ಟಿದವರು ಯಾರು ಎಂಬುದು ಅವರಿಗೆ ಗೊತ್ತಿಲ್ಲವೇ? ಅಂದು ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ಏನಾಗುತ್ತಿತ್ತು? ದೇವೇಗೌಡರ ಪರವಾಗಿ ಅಂದು ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡಿರಲಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಗೌಡರ ಕುಟುಂಬಕ್ಕೆ ಮಠಾಧೀಶರ ಋಣವನ್ನು ನೆನಪಿಸಿದರು.
ಕೇವಲ ದೇವೇಗೌಡರ ವಿಚಾರದಲ್ಲಿ ಮಾತ್ರವಲ್ಲ, ಡಿ ವಿ ಸದಾನಂದ ಗೌಡರಿಗೆ ಮುಖ್ಯಮಂತ್ರಿ ಸ್ಥಾನದಿಂದ ತೊಂದರೆಯಾದಾಗಲೂ ಸ್ವಾಮೀಜಿಗಳು ಸುಮ್ಮನೆ ಕೂರಲಿಲ್ಲ. ಅಂದು ಕೂಡ ಮಠಾಧೀಶರು ಒಕ್ಕಲಿಗ ನಾಯಕನ ಪರವಾಗಿ ಧ್ವನಿ ಎತ್ತಿದ್ದರು. ಇಂತಹ ಎಷ್ಟೋ ಸಂದರ್ಭಗಳಲ್ಲಿ ಸ್ವಾಮೀಜಿಗಳು ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಸಮುದಾಯದ ನಾಯಕರಿಗೆ ಅನ್ಯಾಯವಾದಾಗ ಅಥವಾ ನಿರ್ಣಾಯಕ ಘಟ್ಟಗಳಲ್ಲಿ ಮಠಾಧೀಶರು ಮಾತನಾಡುವುದು ಸಹಜ ಎಂದು ಡಿಕೆಶಿ ಸಮರ್ಥಿಸಿಕೊಂಡರು.
ನಾನು ಸ್ವಾಮೀಜಿಗಳ ಬೆಂಬಲ ಕೇಳಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ನಾನೇನು ಸ್ವಾಮೀಜಿಗಳ ಬಳಿ ಹೋಗಿ ಅರ್ಜಿ ಹಾಕಿದ್ದೇನಾ? ನಾನೂ ಕೂಡ ಯಾರ ಬೆಂಬಲವನ್ನೂ ಕೇಳಿಲ್ಲ. ಬಾಳೆಹೊನ್ನೂರು ಶ್ರೀಗಳು, ಶ್ರೀಶೈಲ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ನನ್ನ ಬಗ್ಗೆ ಪ್ರೀತಿ ಅಭಿಮಾನದಿಂದ ಮಾತನಾಡಿದ್ದಾರೆ. ಅವರು ಪ್ರೀತಿಯಿಂದ ಆಶೀರ್ವಾದ ಮಾಡಿದರೆ, ಮಾತನಾಡಿದರೆ ಅದನ್ನು ಬೇಡ ಎನ್ನಲು ಸಾಧ್ಯವೇ ಅಥವಾ ಅದು ತಪ್ಪು ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬೇರೆ ಸಂದರ್ಭಗಳಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಎಂದು ಕೂಡ ಬೇಸರ ಮಾಡಿಕೊಂಡಿಲ್ಲ. ಈಗ ನನ್ನ ಪರವಾಗಿ ಮಾತನಾಡಿದ ತಕ್ಷಣ ಕುಮಾರಸ್ವಾಮಿಯವರಿಗೆ ಯಾಕೆ ಇಷ್ಟು ಅಸಮಾಧಾನ ಎಂದು ಡಿಕೆಶಿ ಚಾಟಿ ಬೀಸಿದರು.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಿಎಂ ಕುರ್ಚಿ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಈ ನಡುವೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಂಜಾವಧೂತ ಶ್ರೀಗಳು ಸೇರಿದಂತೆ ಪ್ರಮುಖ ಒಕ್ಕಲಿಗ ಮಠಾಧೀಶರು, ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂದು ಬಹಿರಂಗವಾಗಿಯೇ ಒತ್ತಾಯಿಸಿದ್ದರು. ಈ ಬೆಳವಣಿಗೆಗೆ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ರಾಜಕೀಯದಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ಸರಿಯಲ್ಲ ಎಂದಿದ್ದರು. ಈ ಹೇಳಿಕೆಯೇ ಈಗ ಒಕ್ಕಲಿಗ ಸಮುದಾಯದ ಈ ಇಬ್ಬರು ಪ್ರಬಲ ನಾಯಕರ ನಡುವಿನ ಮಾತಿನ ಯುದ್ಧಕ್ಕೆ ಕಾರಣವಾಗಿದೆ.








