ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣ ಪತ್ತೆಯಾದ ಕಾರಣ ಜ್ವರ, ಕೆಮ್ಮ, ಉಸಿರಾಟದ ತೊಂದರೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಫೀವರ್ ಕ್ಲಿನಿಕ್ ಸಂಪರ್ಕಿಸಲು ಅಥವಾ ಸರಕಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ಅಥವಾ 1077 ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟನೆ ಹೊರಡಿಸಿದೆ.
ಕೊರೋನಾ ಸೋಂಕನ್ನು ತಡೆಗಟ್ಟಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ನಿರಂತರವಾಗಿ ಶ್ರಮಿಸುತ್ತಿದೆ. ವಿದೇಶಿ ಪ್ರಯಾಣದ ಇತಿಹಾಸ ಹೊಂದಿರುವ ಪ್ರತಿಯೊಂದು ಮನೆಯ ಮಾಹಿತಿಯನ್ನು ಕಲೆ ಹಾಕಿ ಮನೆಯಲ್ಲಿಯೇ ಕ್ಯಾರೆಂಟೈನ್ ನಲ್ಲಿ ಇರುವವರನ್ನು ಸಂಪರ್ಕಿಸಿ, ಅವರ ಆರೋಗ್ಯ ವಿಷಯದ ಬಗ್ಗೆ ಹೆಚ್ಚಿನ ಗಮನವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ವಹಿಸುತ್ತಿದ್ದಾರೆ.
ಜ್ವರ, ಕೆಮ್ಮ, ಉಸಿರಾಟದ ತೊಂದರೆ ಇದ್ದಲ್ಲಿ ಸಾರ್ವಜನಿಕರು ನೇರವಾಗಿ ಹತ್ತಿರದ ಫೀವರ್ ಕ್ಲಿನಿಕ್ ಸಂಪರ್ಕಿಸಲು ತಿಳಿಸಲಾಗಿದೆ. ಜ್ವರ, ಉಸಿರಾಟದ ತೊಂದರೆ ಇರುವಂತಹ ರೋಗಿಗಳ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ನೀಡಲು ಈಗಾಗಲೇ ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಆದೇಶಿಸಲಾಗಿದೆ. ಅದರಂತೆ ಎಲ್ಲಾ ಖಾಸಗಿ ವೈದ್ಯಾಧಿಕಾರಿಗಳು ಸಹ ಮಾಹಿತಿಯನ್ನು ನೀಡಬೇಕಿದ್ದು ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ಕೊರೋನಾ ಪರೀಕ್ಷೆಗೆ ಒಳಪಡುವ ಭಯದಿಂದ, ಮನೆಯಲ್ಲಿ ಅಥವಾ ಸರ್ಕಾರಿ ನಿಗಾದಲ್ಲಿ ಇರಬೇಕಾಗಬಹುದು ಎನ್ನುವ ಅಂಜಿಕೆಯಿಂದ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಅಧಿಕಾರಿಗಳೊಂದಿಗೆ ಹೇಳಿಕೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗಳ ಕಛೇರಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಈವರೆಗೆ ಪರೀಕ್ಷೆಗೊಳಪಟ್ಟಿರುವಂತಹ ಯಾವೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿರುವುದಿಲ್ಲ. ಕೊರೊನಾ ಸೋಂಕು ದೃಢ ಪಟ್ಟಿರುವ ರೋಗಿಗಳ ಸಂಖ್ಯೆಗಳ ಮಾಹಿತಿಯನ್ನು ಮಾತ್ರ ಸಾರ್ವಜನಿಕರ ಮಾಹಿತಿಗಾಗಿ ನೀಡಲಾಗಿದ್ದು, ಇದು ಸಹ ಸಾರ್ವಜನಿಕರು ವಹಿಸಬೇಕಾದ ಮುಂಜಾಗರೂಕತಾ ಕ್ರಮಕ್ಕಾಗಿ ನೀಡಿರುವ ಮಾಹಿತಿ ಆಗಿರುತ್ತದೆ ಎಂದು ತಿಳಿಸಿದೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಸಂಕೋಚಪಡದೆ, ತಮ್ಮ ಕುಟುಂಬದ ಹಾಗೂ ಇತರರ ರಕ್ಷಣೆಗಾಗಿ ಜಿಲ್ಲೆಗೆ, ವಿದೇಶದಿಂದ ಜನವರಿ ತಿಂಗಳಿನಿಂದ ಆಗಮಿಸಿರುವವರ ಮಾಹಿತಿಯನ್ನು ನೀಡುವಂತೆ ಸೂಚಿಸಿದೆ. ತಮ್ಮ ಕುಟುಂಬದಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ತಕ್ಷಣವೇ ಸರಕಾರಿ ವೈದ್ಯಾಧಿಕಾರಿಗಳ ಗಮನಕ್ಕೆ ತರಲು ಅಥವಾ 1077 ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ತ್ವರಿತವಾಗಿ ಮಾಹಿತಿಯನ್ನು ನೀಡಿದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆತು ಗುಣಪಡಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.








