ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಮತ್ತೊಮ್ಮೆ ಅಧಿಕಾರದ ಹಗ್ಗಜಗ್ಗಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ಇದೀಗ ದೆಹಲಿ ಅಂಗಳ ತಲುಪಿದ್ದು, ಕಾಂಗ್ರೆಸ್ ಹೈಕಮಾಂಡ್ ನಡೆ ರಾಜ್ಯ ನಾಯಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ವಿಶೇಷವಾಗಿ, ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಆಹ್ವಾನ ನೀಡದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಿಎಂಗೆ ಮಣೆ ಡಿಸಿಎಂಗೆ ಕೊಕ್?
ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈ ನಡುವೆ ದೆಹಲಿಯಲ್ಲಿ ಡಿಸೆಂಬರ್ 27ರಂದು ನಡೆಯಲಿರುವ ಮಹತ್ವದ ಸಿಡಬ್ಲ್ಯೂಸಿ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಈ ಸಭೆಯಿಂದ ದೂರವಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಇದು ಹೈಕಮಾಂಡ್ ನೀಡಿದ ಪರೋಕ್ಷ ಸಂದೇಶವೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ.
ಖರ್ಗೆ ಭೇಟಿ ಬಳಿಕ ಸ್ಫೋಟಕ ಹೇಳಿಕೆ
ತಮಗೆ ಆಹ್ವಾನವಿಲ್ಲ ಎಂಬ ವಿಚಾರ ತಿಳಿದ ಬೆನ್ನಲ್ಲೇ, ನಿನ್ನೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿಯಾದರು. ಸದಾಶಿವನಗರದ ನಿವಾಸದಲ್ಲಿ ನಡೆದ ಈ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ದೆಹಲಿಯಲ್ಲಿ ನಡೆಯುವ ಸಭೆಯ ಬಗ್ಗೆ ಮಾತನಾಡಿದ ಅವರು, ಡಿಸೆಂಬರ್ 27ರಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಇದೆ. ಆದರೆ, ಆ ಸಭೆಗೆ ನನ್ನನ್ನು ಕರೆದಿಲ್ಲ. ಕರೆದರೆ ನಾನು ಹೋಗುತ್ತೇನೆ. ಸಿಎಂ ಸಿದ್ದರಾಮಯ್ಯ ಅವರನ್ನು ಸಿಡಬ್ಲ್ಯೂಸಿ ಸಭೆಗೆ ಕರೆದ ಮಾಹಿತಿ ಇದ್ದು, ಸಭೆಯಲ್ಲಿ ಭಾಗಿಯಾಗಲು ಸಿಎಂ ದೆಹಲಿಗೆ ಹೋಗುತ್ತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈ ಮೂಲಕ ತಮಗೆ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಮನ್ನಣೆ ಸಿಗದಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ.
ರಾಹುಲ್ ಭೇಟಿಗೆ ಸಿಗದ ಅವಕಾಶ
ಕೆಲವು ದಿನಗಳ ಹಿಂದಷ್ಟೇ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅಲ್ಲಿ ಅವರು ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲು ಯತ್ನಿಸಿದ್ದರು. ಆದರೆ, ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದೆ ಡಿಕೆಶಿ ಬರಿಗೈಲಿ ವಾಪಸಾಗಬೇಕಾಯಿತು ಎನ್ನಲಾಗಿದೆ. ಇದೀಗ ಸಿಡಬ್ಲ್ಯೂಸಿ ಸಭೆಗೂ ಆಹ್ವಾನವಿಲ್ಲದಿರುವುದು ಡಿಕೆಶಿ ಪಾಳಯದಲ್ಲಿ ಆತಂಕ ಮೂಡಿಸಿದೆ.
ಒಟ್ಟಾರೆಯಾಗಿ, ರಾಜ್ಯ ಕಾಂಗ್ರೆಸ್‌ನ ಇಬ್ಬರು ಪ್ರಬಲ ನಾಯಕರ ನಡುವಿನ ಶೀತಲ ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಹೈಕಮಾಂಡ್ ಜತೆಗಿನ ಅವರ ಮಾತುಕತೆ ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.








