ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಅವರ ನಿಗೂಢ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಪ್ರಕರಣಕ್ಕೆ ಸ್ಪೋಟಕ ತಿರುವು ನೀಡಿದೆ. ಹತ್ತು ಸಾವಿರ ಕೋಟಿ ಒಡೆಯನ ಸಾವಿನ ಹಿಂದೆ ರಾಜಕೀಯ ಒತ್ತಡ, ಐಟಿ ದಾಳಿ ಮತ್ತು ಭೂ ಅಕ್ರಮಗಳ ಕರಾಳ ಹಸ್ತವಿದೆಯೇ ಎಂಬ ಅನುಮಾನಗಳು ಬಲವಾಗುತ್ತಿವೆ. ಅಂದು ಡಿ.ಕೆ.ರವಿ ಎತ್ತಿದ್ದ ಪ್ರಶ್ನೆಗಳು ಇಂದು ಭೂತವಾಗಿ ಕಾಡಲಾರಂಭಿಸಿವೆ.
ಅಂದೇ ಗುಡುಗಿದ್ದ ಡಿ ಕೆ ರವಿ
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ಕಾನ್ಫಿಡೆಂಟ್ ಗ್ರೂಪ್ ನಡೆಸಿದೆ ಎನ್ನಲಾದ ಭೂ ಅಕ್ರಮದ ವಿರುದ್ಧ ಸಮರ ಸಾರಿದ್ದರು. ಬಂಗಾರಪೇಟೆ ತಾಲೂಕಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 48 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸಲಾಗಿದೆ ಎಂದು ರವಿ ಅವರು ನೇರವಾಗಿಯೇ ಆರೋಪಿಸಿದ್ದರು. ಸರ್ಕಾರಿ ಆಸ್ತಿಯನ್ನು ರಕ್ಷಿಸಲು ಜನರ ಪರವಾಗಿ ನಾನು ಎಂತಹ ಹೋರಾಟಕ್ಕೂ ಸಿದ್ಧ ಎಂದು ಅವರು ಅಂದು ಆಡಿದ ಮಾತುಗಳ ವಿಡಿಯೋ ಈಗ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭೂಗಳ್ಳರ ವಿರುದ್ಧದ ಅವರ ಈ ದಿಟ್ಟ ನಿಲುವೇ ಅವರ ವರ್ಗಾವಣೆಗೂ ಮತ್ತು ನಂತರದ ಅಸಹಜ ಸಾವಿಗೂ ಕಾರಣವಾಯಿತೇ ಎಂಬ ಪ್ರಶ್ನೆ ಮತ್ತೆ ಜೀವ ಪಡೆದುಕೊಂಡಿದೆ.
ಶೂನ್ಯದಿಂದ ಸಾಮ್ರಾಜ್ಯ ಮತ್ತು ಅಕ್ರಮದ ನೆರಳು
ಯಾವುದೇ ಸಾಲ ಮಾಡದೆಯೇ 10 ಸಾವಿರ ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿದ ಉದ್ಯಮಿ ಎಂದು ಸಿ.ಜೆ.ರಾಯ್ ಅವರನ್ನು ಒಂದು ವರ್ಗ ಕೊಂಡಾಡುತ್ತಿದೆ. ಆದರೆ, ಮತ್ತೊಂದೆಡೆ ಅವರ ಈ ಅಸಹಜ ಬೆಳವಣಿಗೆಯ ಹಿಂದೆ ರಾಜಕೀಯ ನಾಯಕರ ಕೃಪಾಕಟಾಕ್ಷವಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಮೂಲತಃ ಸಾಧಾರಣ ಹಿನ್ನೆಲೆಯುಳ್ಳ ರಾಯ್, ಕೇರಳದ ನಂಬೂದಿರಿ ಕುಟುಂಬದ ಸಂಪರ್ಕದ ಮೂಲಕ ಅನಾಮತ್ ಆಸ್ತಿಗಳನ್ನು ಪಡೆದರು ಹಾಗೂ ನಂತರ ರಾಜಕಾರಣಿಗಳ ಬೇನಾಮಿ ಆಸ್ತಿಗಳ ಪಾಲಕರಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಧಿಪತ್ಯ ಸಾಧಿಸಿದರು ಎಂಬ ಗಂಭೀರ ಆರೋಪಗಳಿವೆ.
ವಿವಾದಿತ ಜಾಗದಲ್ಲಿ ತಲೆ ಎತ್ತಿದ ಐಷಾರಾಮಿ ಗಾಲ್ಫ್ ಕ್ಲಬ್
ಡಿ.ಕೆ.ರವಿ ಅವರು ಯಾವ 48 ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಬೊಟ್ಟು ಮಾಡಿದ್ದರೋ, ಅದೇ ಜಾಗದಲ್ಲಿ ಇಂದು ಬೃಹತ್ ಐಷಾರಾಮಿ ಗಾಲ್ಫ್ ಕ್ಲಬ್ ತಲೆ ಎತ್ತಿ ನಿಂತಿದೆ. ವಿಶೇಷವೆಂದರೆ, ಆಡಳಿತ ಪಕ್ಷದ ಶಾಸಕರೊಬ್ಬರು ವಿಧಾನಸಭೆಯಲ್ಲಿ ಒಂದೂವರೆ ಗಂಟೆಗಳ ಕಾಲ ಭಾಷಣ ಮಾಡಿ, ಇದು ಒತ್ತುವರಿ ಜಾಗವಲ್ಲ, ಪಿತ್ರಾರ್ಜಿತ ಆಸ್ತಿ ಎಂದು ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ತಮ್ಮದೇ ಪಕ್ಷದ ಸಚಿವರ ವಿರುದ್ಧ ಆರೋಪ ಮಾಡುವ ಮೂಲಕ, ಈ ಭೂವಿವಾದವು ಆಡಳಿತ ಪಕ್ಷದೊಳಗಿನ ಆಂತರಿಕ ಗುದ್ದಾಟಕ್ಕೂ ಕಾರಣವಾಗಿತ್ತು. ಸ್ವತಃ ಶಾಸಕರೇ ಸಿ.ಜೆ.ರಾಯ್ ಈ ಗಾಲ್ಫ್ ಕ್ಲಬ್ ಪಾಲುದಾರರು ಎಂದು ಒಪ್ಪಿಕೊಂಡಿರುವುದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೇರಳ ಚುನಾವಣೆ ಮತ್ತು ಐಟಿ ದಾಳಿಯ ಬಿಸಿ
ಸಿ.ಜೆ.ರಾಯ್ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿ ಕೇಳಿಬರುತ್ತಿರುವ ಮತ್ತೊಂದು ಅಂಶವೆಂದರೆ ಕೇರಳ ವಿಧಾನಸಭೆ ಚುನಾವಣೆಯ ಫಂಡಿಂಗ್. ರಾಜ್ಯದ ಪ್ರಭಾವಿ ನಾಯಕರ ಸೂಚನೆಯ ಮೇರೆಗೆ ಕೇರಳ ಚುನಾವಣೆಗೆ ಕೋಟ್ಯಂತರ ರೂಪಾಯಿಗಳನ್ನು ರವಾನಿಸಲಾಗಿತ್ತು ಎನ್ನಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ಈ ಸುಳಿವು ಪಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕ ದಾಖಲೆಗಳ ಆಧಾರದ ಮೇಲೆ, ಹಣದ ಮೂಲ ಮತ್ತು ಪ್ರಭಾವಿ ನಾಯಕರ ಹೆಸರನ್ನು ಬಾಯಿಬಿಡುವಂತೆ ರಾಯ್ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು. ಹೆಸರೇಳಿದರೆ ಪ್ರಭಾವಿಗಳ ಕೆಂಗಣ್ಣು, ಹೇಳದಿದ್ದರೆ ಭಾರೀ ದಂಡ ಮತ್ತು ಜೈಲು ಎಂಬ ಇಕ್ಕಟ್ಟಿಗೆ ಸಿಲುಕಿ ರಾಯ್ ಮಾನಸಿಕವಾಗಿ ಜರ್ಜರಿತರಾಗಿದ್ದರು ಎಂಬ ಮಾಹಿತಿಯಿದೆ.
ಎಸ್ ಐ ಟಿ ರಚನೆ ತನಿಖೆಯೋ ಅಥವಾ ಮುಚ್ಚಿಹಾಕುವ ತಂತ್ರವೋ
ಸಾಮಾನ್ಯವಾಗಿ ಠಾಣಾ ಮಟ್ಟದಲ್ಲಿ ತನಿಖೆಯಾಗಬೇಕಿದ್ದ ಆತ್ಮಹತ್ಯೆ ಪ್ರಕರಣಕ್ಕೆ, ರಾಜ್ಯ ಸರ್ಕಾರ ತರಾತುರಿಯಲ್ಲಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಎಸ್ ಐ ಟಿ (ವಿಶೇಷ ತನಿಖಾ ದಳ) ರಚನೆ ಮಾಡಿರುವುದು ಹುಬ್ಬೇರಿಸಿದೆ. ಇದು ಸತ್ಯವನ್ನು ಹೊರಗೆಳೆಯುವ ಪ್ರಯತ್ನವೋ ಅಥವಾ ಪ್ರಭಾವಿ ನಾಯಕರ ಹೆಸರು ಹೊರಬಾರದಂತೆ ತಡೆಯುವ ತಂತ್ರವೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಒಟ್ಟಾರೆಯಾಗಿ, ಸಿ.ಜೆ.ರಾಯ್ ಸಾವು ಕೇವಲ ಒಬ್ಬ ಉದ್ಯಮಿಯ ಅಂತ್ಯವಲ್ಲ, ಬದಲಿಗೆ ಭೂ ಮಾಫಿಯಾ, ರಾಜಕೀಯ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಡಿ.ಕೆ.ರವಿ ಅಂದು ಹಚ್ಚಿದ್ದ ಕಿಡಿ, ಇಂದು ಹೆಮ್ಮರವಾಗಿ ಬೆಳೆದು ನಿಂತಿರುವ ಅಕ್ರಮದ ಸಾಮ್ರಾಜ್ಯವನ್ನು ದಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.








