ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದ ಡಿಕೆಶಿ ಪುತ್ರಿ
ಬೆಂಗಳೂರು : ಪ್ರೇಮಿಗಳ ದಿನವಾದ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಖಾಸಗಿ ಹೋಟೆಲ್ ನಲ್ಲಿ ಐಶ್ವರ್ಯ ಮತ್ತು ಅಮರ್ಥ್ಯ ಸುಬ್ರಹ್ಮಣ್ಯ ಹೆಗ್ಡೆ ವಿವಾಹ ನರವೇರಿದೆ. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಬೆಳಗ್ಗೆ 9 ರಿಂದ 9.45 ರ ನಡುವಿನ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಗಿದೆ.
ಇಂದಿನ ಮದುವೆಗೆ ಒಟ್ಟು 800 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ತಮ್ಮ ಮಗಳಿಗೆ ಅಮರ್ಥ್ಯ ತಾಳಿ ಕಟ್ಟುತ್ತಿದ್ದಂತೆ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಭಾವುಕರಾದ ಐಶ್ವರ್ಯ ಕೂಡ ಕಣ್ತುಂಬಿಕೊಂಡಿದ್ದಾರೆ. ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ವಜ್ರಾಭರಣಗಳನ್ನು ತೊಟ್ಟಿದ್ದ ಐಶ್ವರ್ಯ ಮದುಮಗಳಾಗಿ ಮಿಂಚುತ್ತಿದ್ದರು.
ಕಳೆದೊಂದು ವಾರದಿಂದ ಡಿಕೆ ಶಿವಕುಮಾರ್ ಮನೆಯಲ್ಲಿ ಐಶ್ವರ್ಯಾಳ ಮದುವೆ ಸಂಭ್ರಮ ಜೋರಾಗಿತ್ತು. ಮೆಹಂದಿ, ಅರಿಶಿಣ ಶಾಸ್ತ್ರ, ಸಂಗೀತ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ.
ಫೆಬ್ರವರಿ 17 ರಂದು ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ರಿಸೆಪ್ಷನ್ ನಡೆಯಲಿದೆ. ಫೆಬ್ರವರಿ 28ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೀಗರ ಊಟ ನಡೆಯಲಿದೆ.









