ಬೆಂಗಳೂರು: ಗಣರಾಜ್ಯೋತ್ಸವ ಸಂಭ್ರಮ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲೂ ಕಳೆಗಟ್ಟಿದೆ. ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಗಣರಾಜ್ಯೋತ್ಸವದ 7 ದಶಕಗಳ ಸಂಭ್ರಮದಲ್ಲಿ ನಾವಿದ್ದೇವೆ. ಲಿಂಗ ಜಾತಿ, ವರ್ಣ ಎಲ್ಲ ಮರೆತು ಸಂವಿಧಾನದಲ್ಲಿ ನಂಬಿಕೆ ಇಟ್ಟು, ಒಕ್ಕೂಟದ ಪರಿಕಲ್ಪನೆಯೊಂದಿಗೆ 7 ದಶಕದ ಗಣತಂತ್ರದ ಸಂಭ್ರಮದಲ್ಲಿದ್ದೇವೆ. ಸ್ವಾತಂತ್ರ ಸಂಗ್ರಾಮದಲ್ಲಿ ಎಲ್ಲಾ ಜಾತಿಯ ಬಂಧುಗಳು ತ್ಯಾಗ, ಬಲಿದಾನ, ಹೋರಾಟದ ಮೂಲಕ ಬ್ರಿಟಿಷರ ಲಾಟಿಗೆ, ಬೂಟಿಗೆ, ಬುಲೆಟ್‍ಗೆ ಎದೆಯೊಡ್ಡಿದ ಪರಿಣಾಮವಾಗಿ ಇತಿಹಾಸದ ಪುಟಗಳಲ್ಲಿ ಈ ದಿನ ಸಾಕ್ಷಿಯಾಗಿದೆ. ಆದರೆ, ಇಂದು ಇಡೀ ರಾಷ್ಟ್ರ ಕವಲು ದಾರಿಗೆ ಹೊರಟಿದೆ. ಕಳೆದ ಒಂದು ವರ್ಷದಿಂದ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ವಿಚಾರದಲ್ಲಿ ಹೋರಾಟಗಳೇ ನಡೆಯುತ್ತಿದೆ. ನಾವು ಭಾರತೀಯರು ಎಂದುಕೊಳ್ಳಲು ವೈಯಕ್ತಿಕ ಗುರುತು ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಡಿಕೆಶಿ ವಿಷಾಧ ವ್ಯಕ್ತಪಡಿಸಿದ್ದಾರೆ.

ರೈತರು ತಮ್ಮ ಭವಿಷ್ಯ ಉಳಿಸಿಕೊಳ್ಳಲು ದೇಶದ ಉದ್ದಗಲಕ್ಕೂ ಬೀದಿಗೆ ಇಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನ್ನದಾತನಿಗೆ ರಕ್ಷಣೆ ಕೊಡಬೇಕಾಗಿದ್ದು, ಅವನ ರಕ್ಷಣೆಗೆ ನಿಲ್ಲಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಂಡವಾಳ ಶಾಹಿಗಳ ಪರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಡಿ.ಕೆ ಶಿವಕುಮಾರ್ ಸೂಚನೆ ನೀಡಿದರು.

ಪೆಟ್ರೋಲ್ ಡೀಸೆಲ್, ಸಿಎಂಟ್, ಕಬ್ಬಣ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದೆ. ಕೊರೊನಾ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಆದ ತೊಂದರೆಗೆ ಸರ್ಕಾರ ಯಾವುದೇ ಸ್ಪಂದನೆ ಮಾಡದೇ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡಿದೆ. ಕೇವಲ ಬಣ್ಣದ ಮಾತುಗಳಿಂದ, ಜಾತಿ-ಜಾತಿಗಳ ನಡುವೆ, ಧರ್ಮಗಳ ನಡುವೆ, ರಾಜ್ಯ-ರಾಜ್ಯಗಳ ನಡುವೆ ಸಂಘರ್ಷ ಉಂಟು ಮಾಡಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ನಡೆಸಬೇಕು ಎಂದು ಡಿಕೆಶಿ ಕರೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








