ಬೆಳಗಾವಿ : ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಬಿಜೆಪಿ ಏಜೆಂಟ್ ಎಂದು ಆರೋಪಿಸಿ “ಮಿಸ್ಟರ್ ಕಮಿಷನರ್ ಬಿ ಕೇರ್ ಪುಲ್” ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಮಿಸ್ಟರ್ ಅಂದಿದ್ದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, “ಮಿಸ್ಟರ್’ ಎಂಬ ಪದವನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಿಸ್ಟರ್ ಅಂದಿದ್ದರಲ್ಲಿ ತಪ್ಪೇನಿದೆ. ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಹೀಗೆ ಮಾಡದಂತೆ ನಮ್ಮ ಅಧ್ಯಕ್ಷರು ಆಯುಕ್ತರಿಗೆ ಹೇಳಿದ್ದಾರೆ. ಈ ವೇಳೆ ಮಿಸ್ಟರ್ ಎಂಬ ಪದವನ್ನು ಡಿ.ಕೆ ಶಿವಕುಮಾರ್ ಬಳಸಿದ್ದಾರೆ. ಇದನ್ನು ಬಿಜೆಪಿಯ ಕೆಲ ನಾಯಕರು ಧಮ್ಕಿ ಹಾಕಿದ್ದಾರೆ ಎನ್ನುತ್ತಿದ್ದಾರೆ. ಈ ಮೊದಲು ಬಿಜೆಪಿ ನಾಯಕರು ಕೂಡ ಹೀಗೆ ನಡೆದುಕೊಂಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಕಿಡಿಕಾರಿದ ಸತೀಶ್ ಜಾರಕಿಹೊಳಿ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದರೂ ಕಂದಾಯ ಸಚಿವರು ಮಾತ್ರ ಇತ್ತ ಬರುತ್ತಿಲ್ಲ. ಕಂದಾಯ ಸಚಿವರು ಕೇವಲ ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಈ ಭಾಗದ ಜನರು ಎಷ್ಟೇ ಸಮಸ್ಯೆ ಎದುರಿಸುತ್ತಿದ್ದರೂ ಕಂದಾಯ ಸಚಿವ ಆರ್.ಅಶೋಕ್ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.









