ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾಜಿಕ ಸ್ವಾಸ್ತ್ಯ ಕೆಡಿಸುತ್ತಿರುವವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುಡುಗಿದ್ದಾರೆ. ಅಲ್ಲದೆ ಸಾಮಾಜಿಕ ಸ್ವಾಸ್ತ್ಯವನ್ನು ಕದಡುವವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸಗಳು ಹೆಚ್ಚಾಗಿ ನಡೆಯುತ್ತಿವೆ. ಕೂಡಲೇ ಈ ಬಗ್ಗೆ ಸೈಬರ್ ಕ್ರೈಮ್ ತನಿಖೆ ನಡೆಯಬೇಕು. ದೆಹಲಿಯ ಜಾಮಿಯಾ ಮಸೀದಿಗೆ ಹೋಗಿ ಬಂದವರ ಪೈಕಿ ಮೂರ್ನಾಲ್ಕು ಮಂದಿಗೆ ಸೋಂಕಿರುವುದು ಖಚಿತವಾಗಿದೆ. ಆದರೆ ಅಲ್ಲಿಗೆ ಹೋಗಿ ಬಂದ ಎಲ್ಲರಿಗೂ ಸೋಂಕು ತಗುಲಿದೆ ಎಂದು ಪ್ರಚಾರ ಮಾಡಲಾಗಿದೆ. ಈ ಬಗ್ಗೆ ಕೂಡಲೇ ಸುತ್ತೋಲೆ ಹೊರಡಿಸಿ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವುದನ್ನು ನೋಡಿಕೊಂಡು ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹಿಂದೆ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ವಿರುದ್ಧ ಕೇಸು ದಾಖಲಿಸಿಲ್ಲವೇ, ಜೈಲಿಗೆ ಕಳುಹಿಸಿಲ್ಲವೇ. ಈಗ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಟ್ರಬಲ್ ಶೂಟರ್ ಗುಡುಗಿದ್ದಾರೆ.
ನಾವು ಕೂಡ ಪಕ್ಷದ ವತಿಯಿಂದ ಏನು ಮಾಡಬೇಕು ಎಂಬ ಬಗ್ಗೆ ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗಾಗಲೇ ಕೆಪಿಸಿಸಿಯಿಂದ ಕಾರ್ಯಪಡೆ ರಚಿಸಲಾಗಿದೆ. ಆನ್ ಲೈನ್ ನಲ್ಲೆ ಕೆಲಸ ಹಂಚಲಾಗುತ್ತಿದೆ. ಕೆಲಸ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ವಿಡಿಯೋ ಕಾನ್ಫ್ ರೆನ್ಸ್ ಮೂಲಕವೇ ಗಮನಿಸುತ್ತಿದ್ದೇವೆ. ಬೆಂಗಳೂರಿಗೆ ಬಂದು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಯಾರು ಬೇಸರ ಪಟ್ಟುಕೊಳ್ಳಬೇಡಿ. ಇದ್ದ ಜಾಗದಿಂದಲೇ ಕೆಲಸ ಮಾಡಿ ಎಂದು ಪಕ್ಷದ ನಾಯಕರಿಗೆ ಮನವಿ ಮಾಡಿದರು.








